ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ

ಸಂ.ಕ.ಸಮಾಚಾರ ಕಲಬುರಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಮಾಡುವ ವಿಚಾರ ನಮ್ಮ ಮುಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ತಮ್ಮ ಮನೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರ ಹೈಕಮಾಂಡ್ ಮುಂದೆ ಇಲ್ಲ. ಈ ಕುರಿತು ಸ್ಪಷ್ಟವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ತಿಳುವಳಿಕೆ ನೀಡಲಾಗಿದೆ, ಜಾತಿ ಗಣತಿ ಮರು ಸಮೀಕ್ಷೆ ಮಾಡಲು ಕರ್ನಾಟಕ ಸರಕಾರಕ್ಕೆ ಸೂಚಿಸಲಾಗಿದೆ ಎಂದರು.

ಜಾತಿ ಸಮೀಕ್ಷೆ ನಡೆದಿರುವುದು 10 ವರ್ಷಗಳ ಹಿಂದೆ ಆಗ ಮತ್ತು ಈಗ ಬಹಳಷ್ಟು ಬದಲಾವಣೆ ಆಗಿದೆ. ಹಲವು ಸಮುದಾಯಗಳು ಓಬಿಸಿನಲ್ಲಿ ಸೇರಿಕೊಂಡಿವೆ. ಅದು ಅಲ್ಲದೆ ಬಹಳಷ್ಟು ಸಾಮಾಜಿಕ ಬದಲಾವಣೆಗಳು ಆಗಿವೆ. ಅವು ಎಲ್ಲವೂ ಜಾತಿ ಸಮೀಕ್ಷೆ ಒಳಗೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.

ವಾಸ್ತವ ನೆಲೆಗಟ್ಟಿನಲ್ಲಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ಆಗಬೇಕಿದೆ. ಈಗ ಹಲವಾರು ಸಮುದಾಯಗಳ ಜಾತಿ ವಿಚಾರದಲ್ಲಿ ತುಸು ವ್ಯತ್ಯಾಸವಾಗಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ಆಗಿರುವ ತಪ್ಪುಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಎಂಎಲ್ ಸಿ ವಿಚಾರ: ವಿಧಾನ ಪರಿಷತ್ತಿಗೆ ನಾಲ್ವರು ಸದಸ್ಯರನ್ನು ನೇಮಕ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಹಾಲಿ ಪಟ್ಟಿಯನ್ನು ತಡೆ ಹಿಡಿಯಲಾಗಿದ್ದು ಮುಂದಿನ ಪಟ್ಟಿ ಶೀಘ್ರವೇ ಪ್ರಕಟಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಮಾಡುವ ವಿಚಾರ ಸದ್ಯಕ್ಕೆ ನಮ್ಮ ಮುಂದೆ ಇಲ್ಲ. ಈಗಾಗಲೇ ಸರ್ಕಾರ ನಾಲ್ವರನ್ನು ನೇಮಕಾತಿ ಮಾಡಿದೆ. ಆ ನಿಟ್ಟಿನಲ್ಲಿ ಕೆಲವು ಆರೋಪಗಳು ಕೇಳಿ ಬಂದಿವೆ. ಅವುಗಳನ್ನು ಬಗೆಹರಿಸಿ ಪುನಃ ಪಟ್ಟಿ ಪ್ರಕಟಿಸಲಾಗುವುದು ಎಂದರು.

ರಾಜ್ಯದಲ್ಲಿ ಇ.ಡಿ ರೇಡ್ ವಿಚಾರ: ಕಾಂಗ್ರೆಸ್ ಎಂಎಲ್ಎಗಳ ಮನೆಗಳ ಮೇಲೆ ಇ.ಡಿ ದಾಳಿ ನಡೆದಿರುವ ಕುರಿತು ಹೆಚ್ಚಿನ ಮಾಹಿತಿ ನನಗೆ ಲಭ್ಯವಿಲ್ಲ ಆದರೆ ಕೇಂದ್ರ ಸರ್ಕಾರ ಇ.ಡಿಯನ್ನು ದುರ್ಬಳಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಸಕರ ಮನೆಗಳ ಮೇಲೆ ದಾಳಿ ಮಾಡಿಸಿ, ಭಿನ್ನಾಭಿಪ್ರಾಯ ಉಂಟು ಮಾಡಿ ಪಕ್ಷವನ್ನು ಸಾರ್ವಜನಿಕವಾಗಿ ಮುಜುಗರಕ್ಕಿಡು ಮಾಡುವ ತಂತ್ರ ಹೆಣೆಯುತ್ತಿದೆ ಎಂದು ಆಪಾದನೆ ಮಾಡಿದರು. ಚುನಾವಣೆಗಳು ಕಳೆದು ವರ್ಷಗಳೇ ಕಳೆದಿವೆ. ಆಗ ನಡೆದಿರುವ ಎಲ್ಲ ಘಟನಾವಳಿಗಳನ್ನು ಇಟ್ಟುಕೊಂಡು ಈಗ ದಾಳಿ ಮಾಡುವ ಉದ್ದೇಶ ಏನು ಎಂದು ಪ್ರಶ್ನಿಸಿದರು. ಹಿಂದೆ ಹಲವಾರು ಬಾರಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಕೋಟ್ಯಾಂತರ ರೂಪಾಯಿಗಳನ್ನು ಸೀಸ್ ಮಾಡಿದ್ದಾರೆ ಹಾಗೆ ಮಾಡಿದ ಹಣ ಎಲ್ಲಿದೆ? ಯಾರು ಬಳಿ ಇದೆ? ಯಾರು ಅದಕ್ಕೆ ಲೆಕ್ಕ ಕೊಡುತ್ತಾರೆ? ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಹಲವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಯಡಿಯೂರಪ್ಪ ಹೆಸರನ್ನು ಪ್ರಸ್ತಾಪಿಸಿದರು.

ಕಾಲ್ತುಳಿತ ರಾಷ್ಟ್ರೀಯ ವಿಚಾರ ಆಗಿರಲಿಲ್ಲ: ಬೆಂಗಳೂರಿನಲ್ಲಿ ಕ್ರಿಕೆಟ್ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ಘಟನೆ ರಾಷ್ಟ್ರೀಯ ವಿಚಾರ ಆಗಿರಲಿಲ್ಲ ಆದರೆ ಬಿಜೆಪಿಯವರು ಅದನ್ನು ದೊಡ್ಡದು ಮಾಡಿದರು. ಆದರೆ ನಾವು ನಡೆದ ಘಟನೆಯನ್ನು ಅಲ್ಲಗಳಿಯುತ್ತಿಲ್ಲ ಅದೊಂದು ಆಕಸ್ಮಿಕವಾಗಿ ಸಂಭವಿಸಿದ್ದ ಘಟನೆಯಾಗಿದೆ. ಅಲ್ಲಿ ಆಗಿರುವ ಸಾವುಗಳು ಯುವಕರದ್ದು, ಅವರ ಕುಟುಂಬಕ್ಕೆ ನಾವು ಸಾಂತ್ವನ ಹೇಳಿದ್ದೇವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮನೆಗಳಿಗೆ ಭೇಟಿ ನೀಡಿ ಕ್ಷಮೆ ಕೇಳಿದ್ದಾರೆ. ಆದರೂ ಕೂಡ ಬಿಜೆಪಿಯವರು ಈ ವಿಚಾರವನ್ನು ದೊಡ್ಡದು ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಅಯೋಧ್ಯೆಯಲ್ಲಿ ಹಾಗೂ ದೇಶದ ಇತರಡೆಗಳಲ್ಲಿ ನಡೆದ ಕಾಲ್ತುಳಿತದ ವೇಳೆ ಹಲವಾರು ಜನಪ್ರಾಣ ಕಳೆದುಕೊಂಡಿದ್ದಾರೆ. ಆಗೆಲ್ಲ ಬಿಜೆಪಿಯವರು ನೈತಿಕತೆ ಹೊತ್ತು ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಕಾಲ್ತುಳಿತ ಘಟನೆಗೆ ನನ್ನ ವಿಷಾದವಿದೆ, ಹೋಗಿದ ಪ್ರಾಣ ಕಳೆದುಕೊಂಡಿರುವ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ ಎಂದರು.