ಹುಬ್ಬಳ್ಳಿ: ಬಿಜೆಪಿಯ ಶಕ್ತಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ರಾಜ್ಯ ಬಿಜೆಪಿ ನಾಯಕರ ಮೇಲೆ ಕೇಂದ್ರ ನಾಯಕರಿಗೆ ನಂಬಿಕೆ ಇಲ್ಲ. ಆ ನಂಬಿಕೆಯನ್ನು ಕಳೆದುಕೊಂಡು ಬಿಟ್ಟಿದ್ದಾರೆ. ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾಗ ಅವರ ಸ್ವಾಗತಕ್ಕೂ ಬಿಜೆಪಿ ನಾಯಕರಿಗೆ ಅವಕಾಶ ಸಿಕ್ಕಿಲ್ಲ; ಇದರಿಂದ ಅರ್ಥ ಮಾಡಿಕೊಳ್ಳಬೇಕು ರಾಜ್ಯ ಬಿಜೆಪಿ ನಾಯಕರ ಸ್ಥಿತಿ ಏನಾಗಿದೆ ಎಂಬುದನ್ನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಲ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷ ಸಂಘಟನೆಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಬಿಜೆಪಿ ಪಕ್ಷದಲ್ಲಿರುವವರನ್ನು ನಾನು ಕಾಂಗ್ರೆಸ್‌ಗೆ ಬನ್ನಿ ಎಂದು ಯಾರನ್ನೂ ಕರೆದಿಲ್ಲ. ಬದಲಾಗಿ ಕಾರ್ಯಕರ್ತರಾದಿಯಾಗಿ ಬಿಜೆಪಿಯ ಅನೇಕರು ಕರೆ ಮಾಡಿದ್ದಾರೆ. ಬಿಜೆಪಿ ತೊರೆಯುವ ಇಂಗಿತ ವ್ಯಕ್ತ ಮಾಡಿದ್ದಾರೆ. ಕರೆ ಮಾಡಿದ್ದು ಯಾರು ಎಂದು ಹೇಳಿದರೆ ಕರೆ ಮಾಡಿದವರಿಗೆ ಆ ಪಕ್ಷದವರಿಂದ ಈಗಲೇ ತೊಂದರೆ ಆಗಬಹುದು. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಶೆಟ್ಟರ ಹೇಳಿದರು.