ಯತ್ನಾಳ್ ಹೆಗಲ ಮೇಲೆ ಬಂದೂಕಿಟ್ಟು ಪಕ್ಷದಲ್ಲಿ ಭಿನ್ನಮತ ಸೃಷ್ಟಿ

0
48

ಗುತ್ತಿಗೆದಾರ ಸಚಿನ್ ಪಾಂಚಾಳ್ ಡೆತ್ ನೋಟ್ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಮತ್ತವರ ಆಪ್ತರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಸರ್ಕಾರ ಪ್ತಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಹಾಗೂ ಬಸ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು.

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೆಹಲಿಗೆ ಹೋದ ಕೆಲವರು ಯತ್ನಾಳ್ ಮತ್ತವರ ಟೀಂನ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಯಾಗಲು ಕೆಲವರ ಕುಮ್ಮಕ್ಕೇ ಕಾರಣ. ತಾವು ಬಿಜೆಪಿಯ ರಾಜ್ಯಾಧ್ಯಾಕ್ಷರಾಗಲು ಯತ್ನಾಳ್ ರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಜಮೀರ್ ಅಹಮದ್ ನನ್ನು ಭೇಟಿ ಮಾಡಿ, ಆಲಿಂಗಸಿಕೊಂಡು, ಅವರೊಂದಿಗೆ ಕಾಫಿ, ಟೀ ಸವಿದರೆ ಅದು ವಕ್ಫ್ ವಿಷಯಕ್ಕೆ ಸಂಬಂಧಿತ ವಿಷಯಕ್ಕೆ ಹೋಗಿದ್ದು ಎನ್ನುತ್ತಾರೆ. ವಿಜಯೇಂದ್ರ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯಕ್ಕೆ ಭೇಟಿ ಮಾಡಲು ಹೋದರೆ ಆರೋಪಿಸುತ್ತಾರೆ ಎಂದು ಯತ್ನಾಳ್ ನಡೆ ಖಂಡಿಸಿದರು.

ಬಿಜೆಪಿಯಲ್ಲಿ ಸಂಕ್ರಾಂತಿ ನಂತರ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ವಿಜೆಯೇಂದ್ರ ನೇತೃತ್ವದಲ್ಲಿಯೇ ಮುಂಬರುವ ಜಿಪಂ, ತಾಪಂ ಚುನಾವಣೆ ನಡೆಯಲಿದೆ ಎಂದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಆರೋಪದಲ್ಲಿ ಕೆ ಎಸ್ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಅದೇ ಮಾದರಿಯಲ್ಲಿ ಗುತ್ತಿಗೆದಾರ ಸಚಿನ್ ಪಾಂಚಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರದಲ್ಲಿರುವ ಇಂದಿನ ಕಾಂಗ್ರೆಸ್ ಸರ್ಕಾರ ಪ್ರಿಯಾಂಕ್ ಖರ್ಗೆ ಅವರಿಂದ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಪ್ರವೀಣ್ ಜಾಧವ್, ರಾಜು ವೀರಣ್ಣ, ಪಂಜು ಪೈಲ್ವಾನ್, ಸುಮಂತ್, ಜಯರುದ್ರಪ್ಪ ಮತ್ತಿತರರು ಇದ್ದರು.

Previous articleನೈಋತ್ಯ ರೈಲ್ವೆ ಹುಬ್ಬಳ್ಳಿ ನೂತನ ಡಿಆರ್‌ಎಂ ಬೇಲಾ ಮೀನಾ ಅಧಿಕಾರ ಸ್ವೀಕಾರ
Next articleಯುವಜನೋತ್ಸವ: ಮೆರವಣಿಗೆಗೆ ಚಾಲನೆ