ಮೂವರು ಡ್ರಗ್ ಪೆಡ್ಲರ್‌ಗಳ ಸೆರೆ: ಪಿಸ್ತೂಲ್, ಡ್ರಗ್ಸ್ ವಶ

0
30

ಮಂಗಳೂರು: ಡ್ರಗ್ಸ್ ಮುಕ್ತ ಮಂಗಳೂರು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಮಂಗಳೂರು ನಗರ ಪೊಲೀಸರು ನಗರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್‌ಗಳನ್ನು ಪಿಸ್ತೂಲ್ ಹಾಗೂ ಡ್ರಗ್ಸ್‌ ಸಹಿತ ಬಂಧಿಸಿದ್ದಾರೆ.
ಉಳ್ಳಾಲದ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಂಟ್ವಾಲ ಪರಂಗಿಪೇಟೆಯ ಪುದು ಗ್ರಾಮದ ಮುಹಮ್ಮದ್ ನಿಯಾರ(೨೮), ತಲಪಾಡಿ ಕೆಸಿರೋಡ್‌ನ ನಿಶಾದ್(೩೧), ಪಡೀಲ್ ಕಣ್ಣೂರಿನ ಮಹಮ್ಮದ್ ರಝೀನ್(೨೪) ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ ೧೮೦ ಗ್ರಾಂ ತೂಕದ ೯ ಲಕ್ಷರೂ. ಮೌಲ್ಯದ ಎಂಡಿಎಂಎ, ೨ ಮಾರುತಿ ಸ್ವಿಫ್ಟ್ ಕಾರುಗಳು, ೪ ಮೊಬೈಲ್ ಫೋನ್‌ಗಳು ೨೨,೦೫೦ ರೂ. ನಗದು, ಪಿಸ್ತೂಲ್, ಸಜೀವ ಗುಂಡು, ೨ ಡ್ರಾಗನ್ ಚೂರಿಗಳು, ಡಿಜಿಟಲ್ ತೂಕದ ಮಾಪನ ಸೇರಿದಂತೆ ೨೭.೬೨ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರೋಪಿ ನಿಯಾರ ಎಂಬಾತನ ವಿರುದ್ಧ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್‌ಐಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಹಲ್ಲೆ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್ ಕೆರೈ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ೨ ಪ್ರಕರಣ, ಉಡುಪಿಯ ಗಂಗೊಳ್ಳಿ ಠಾಣೆಯಲ್ಲಿ ೨ ದರೋಡೆ ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ, ಕೊಣಾಜೆ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ೨ ಪ್ರಕರಣಗಳು ಸೇರಿ ಒಟ್ಟು ೧೦ ಪ್ರಕರಣಗಳು ದಾಖಲಾಗಿವೆ. ಈತ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್ ಜಾರಿಯಾಗಿರುತ್ತದೆ ಎಂದರು.
ಮಹಮ್ಮದ್ ರಝೀನ್ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಈ ಮಾರಾಟ ಜಾಲ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷರಾದ ಶ್ಯಾಮ್ ಸುಂದರ್ ಎಚ್. ಎಂ., ಪಿಎಸ್‌ಐ ರಾಜೇಂದ್ರ ಬಿ., ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಪೊಲೀಸರು ಭಾಗವಹಿಸಿದ್ದು, ತಂಡಕ್ಕೆ ೨೦,೦೦೦ ರೂ. ಬಹುಮಾನ ಘೋಷಿಸುವುದಾಗಿ ತಿಳಿಸಿದರು.
ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Previous articleಬಿಎಸ್‌ವೈಗೆ ಗೌರವ ಡಾಕ್ಟರೇಟ್ ಪ್ರದಾನ
Next articleಬಜರಂಗದಳದ ಮೂವರಿಗೆ ಗಡಿಪಾರು ನೋಟಿಸು