ಮುಂದುವರೆದ ಮಳೆ: ಅಪಾರ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತ್ತವಾಗಿವೆ.
ನಗರದಲ್ಲಿ ಇಂದು ಬೆಳಗ್ಗಿನಿಂದ ಉತ್ತಮ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪಂಪ್‌ವೆಲ್, ಉರ್ವಸ್ಟೋರ್, ನೀರುಮಾರ್ಗ, ಜ್ಯೋತಿ, ಸಹಿತ ವಿವಿಧೆಡೆ ರಸ್ತೆಗಳು ಜಲಾವೃತ್ತವಾಗಿದೆ. ಪಿವಿಎಸ್ ಸೇರಿದಂತೆ ಕೆಲವೆಡೆ ಹೋಟೆಲ್ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.
ಈ ನಡುವೆ ಅಳಕೆ ಭೋಜರಾವ್ ಲೇನ್‌ನಲ್ಲಿರುವ ಮನೆಯೊಂದರ ಮೇಲೆ ಮರ ಉರುಳಿ ಬಿದ್ದ ಘಟನೆಯೂ ನಡೆದಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಬಂಟ್ವಾಳದಲ್ಲಿ ಧರೆ ಕುಸಿದಿದೆ, ಕಡಬದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು, ಪ್ರಾಣಪಾಯದಿಂದ ಸವಾರರು ಪಾರಾಗಿದ್ದಾರೆ. ಜಿಲ್ಲೆಯ ಜೀವ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿವೆ.