ಮಾಸ್ಟರ್ ಪ್ಲ್ಯಾನ್ ಮಾಡಿ ಆರೋಪಿಯನ್ನು ಕೆಳಗಿಳಿಸಿದ ಪೊಲೀಸರು

0
20

ಧಾರವಾಡ: ಪೊಲೀಸರಿಂದ ತಪ್ಪಿಸಿಕೊಂಡು ತನಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಮೂರು ಅಂತಸ್ತಿನ ಕಟ್ಟಡ ಏರಿದ್ದ ವಿಚಾರಣಾಧೀನ ಕೈದಿಯನ್ನು ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡಿ ಕೆಳಗಿಳಿಸಿದ್ದಾರೆ.
ಮೂಲತಃ ಅಣ್ಣಿಗೇರಿಯವನಾದ ವಿಜಯ್ ಎಂಬಾತನ ಮೇಲೆ ಪೊಕ್ಸೊ ಪ್ರಕರಣದಡಿ ದೂರು ದಾಖಲಾಗಿ, ಆತ ಜಾಮೀನಿನ ಮೇಲೆ ಹೊರಗಿದ್ದ. ಆದರೆ ಆತನ ಮೇಲೆ ಬಾಡಿ ವಾರಂಟ್ ಜಾರಿಯಾದ ಹಿನ್ನೆಲೆ ಆತನನ್ನು ಬಂಧಿಸಿ, ಇಂದು ಪೊಲೀಸರು ನ್ಯಾಯಾಧೀಶರೆದರು ಹಾಜರುಪಡಿಸಲು ಕರೆದುಕೊಂಡು ಬರುತ್ತಿದ್ದರು.
ಈ ವೇಳೆ ಅಣ್ಣಿಗೇರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಆರೋಪಿ ವಿಜಯ್, ಧಾರವಾಡ ಮಲಪ್ರಭಾ ನಗರದ ಮೂರು ಅಂತಸ್ತಿನ ಕಟ್ಟಡವೇರಿ ನನಗೆ ನ್ಯಾಯ ಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ವಿನಾಕಾರಣ ನನಗೆ ತೊಂದರೆ ಕೊಡುತ್ತಿದ್ದಾರೆ. ನ್ಯಾಯಾಧೀಶರು ಸ್ಥಳಕ್ಕೆ ಬರಬೇಕು. ನನ್ನ ತಂದೆ ತಾಯಿಯನ್ನು ಸ್ಥಳಕ್ಕೆ ಕರೆಯಿಸಿ ಇಲ್ಲದೇ ಹೋದರೆ ಕಟ್ಟಡದ ಮೇಲಿಂದ ಬಿದ್ದು ಸಾಯುತ್ತೇನೆ ಎಂದು ಯುವಕ ವಿಜಯ್ ಬೆದರಿಕೆ ಹಾಕಿ ಹೈಡ್ರಾಮಾವನ್ನೇ ಸೃಷ್ಟಿಸಿದ.
ಆ ಸ್ಥಳದಲ್ಲಿ ಜನ ಜಮಾಯಿಸಿದ್ದರಿಂದ ಅದೇ ಸಮಯಕ್ಕೆ ಕೋಟ್ ಹಾಕಿಕೊಂಡು ಉಪನ್ಯಾಸಕರೊಬ್ಬರು ಅಲ್ಲಿ ಏನಾಗುತ್ತಿದೆ ಎಂದು ನೋಡಲು ಬಂದಿದ್ದರು. ಇದನ್ನೇ ಸದುಪಯೋಗಪಡಿಸಿಕೊಂಡ ಪೊಲೀಸರು, ಆ ಉಪನ್ಯಾಸಕರನ್ನೇ ನ್ಯಾಯಾಧೀಶರೆಂದು ಆರೋಪಿ ವಿಜಯ್‌ಗೆ ತೋರಿಸಿ ಕೆಳಗಿಳಿಯುವಂತೆ ಮನವಿ ಮಾಡಿದರು. ಸ್ಥಳಕ್ಕೆ ಮಾಧ್ಯಮದವರೂ ಬಂದಿದ್ದಾರೆ. ನಿನಗೆ ನ್ಯಾಯ ಕೊಡಿಸುತ್ತಾರೆ ಎಂದು ಆರೋಪಿ ವಿಜಯ್‌ನ ಮನವೊಲಿಸಿದರು. ನಂತರ ಕಟ್ಟಡದ ಮೇಲೆ ಮಾಧ್ಯಮದವರು ಹಾಗೂ ಆ ಉಪನ್ಯಾಸಕರು ತೆರಳಿ ಆರೋಪಿ ವಿಜಯ್‌ನ ಮನವೊಲಿಸಿ ಕೆಳಗಿಳಿಸಿಕೊಂಡು ಬಂದ ಪ್ರಸಂಗ ನಡೆಯಿತು.

Previous articleಬಣ ಬಡಿದಾಟ ಮೈತ್ರಿ ಮೇಲೆ ಪರಿಣಾಮ ಬೀರಲ್ಲ
Next articleಕಾಂಗ್ರೆಸ್ಸಿಗರು ರಾಹುಲ್‌ಗಾಂಧಿ ಅಸಮರ್ಥತೆ ಬಗ್ಗೆ ಮಾತಾಡಲಿ