ದಾವಣಗೆರೆ: ಜಿಲ್ಲೆಯ ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆರ್.ಎಲ್. ಶಿವಪ್ರಕಾಶ್ ನಾಮಪತ್ರ ಹಿಂಪಡೆದಿದ್ದಾರೆ.
ಮಾಯಕೊಂಡದಲ್ಲಿ ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್‌ಗೆ ಟಿಕೇಟ್ ನೀಡಿದ್ದರಿಂದ ಅಸಮಾಧಾನಗೊಂಡು ಎಂಟು ಜನ ಮುಖಂಡರು ಬಂಡಾಯವೆದ್ದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಪಾಲಿಕೆ ಸದಸ್ಯರಾಗಿದ್ದ ಆರ್.ಎಲ್. ಶಿವಪ್ರಕಾಶ್ ಅವರನ್ನು ಕಣಕ್ಕಿಳಿಸಿದ್ದರು. ನಮ್ಮಲ್ಲಿಯೇ ಶಿವಪ್ರಕಾಶ್ ಸೇರಿದಂತೆ ಯಾರಿಗಾದರೂ ವರಿಷ್ಠರು ಟಿಕೆಟ್ ನೀಡಬೇಕು. ಇಲ್ಲವಾದರೆ ಯಾರ ಮಾತಿಗೂ ತಾವು ನಾಮಪತ್ರ ವಾಪಸ್ಸು ಪಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಸೋಮವಾರ ನಾಮಪತ್ರ ಹಿಂಪಡೆದಿದ್ದಾರೆ.
ಪಕ್ಷದ ವರಿಷ್ಠರು, ಹಿರಿಯ ನಾಯಕರ ಮಾತಿಗೆ ಬೆಲೆ ನೀಡಿ ನಾನು ನಾಮಪತ್ರ ವಾಪಸ್ಸು ಪಡೆಯುತ್ತಿದ್ದೇನೆ ಹೊರತು ಯಾವುದೇ ಆಮಿಷಕ್ಕೂ ಒಳಗಾಗಿಲ್ಲ ಎಂದು ಆರ್.ಎಲ್. ಶಿವಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.