ಮನುಷ್ಯತ್ವ ಕಳೆದುಕೊಂಡ ಅಯೋಗ್ಯ ಸರಕಾರ

0
31


ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ ಎನ್‌ಐಎ ತನಿಖೆಗೆ ನೀಡುವಂತೆ ರಾಜ್ಯ ಸರಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದೆ ಆದರೆ ರಾಜ್ಯದ ಆಯೋಗ್ಯ ಸರಕಾರ ಮನುಷ್ಯತ್ವವನ್ನೇ ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಸುಳ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಹಾಸ್ ಅಂತ್ಯಕ್ರಿಯೆ ಯಲ್ಲೂ ನಾನು ಭಾಗವಹಿಸಿದ್ದೇನೆ. ಪ್ರಕರಣವನ್ನು ಉನ್ನತ ಮಟ್ಟದ ತನಿಖೆ, ಎನ್‌ಐಎಗೆ ಕೊಡಬೇಕೆಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಸುಹಾಸ್ ತಾಯಿ ಸೇರಿದಂತೆ ಎಲ್ಲರೂ ಆ ಸಂದರ್ಭದಲ್ಲಿ ಭಾಗಿಯಾಗಿದ್ದರು. ಅಲ್ಲದೆ ರಾಜ್ಯಪಾಲರು ಸರಕಾರಕ್ಕೆ ಈ ಬಗ್ಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದೇವೆ, ನಮ್ಮ ಮನವಿಗೆ ರಾಜ್ಯಪಾಲರು ಸರರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಿದ್ಧರಾಮಯ್ಯ ನೇತೃತ್ವದ ಭಂಡ ಸರಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ, ಬಿಜೆಪಿ ನಿರಂತರವಾಗಿ ಈ ವಿಚಾರವನ್ನು ಒತ್ತಾಯಿಸಲಿದೆ. ಸುಹಾಸ್ ಮನೆಗೆ ಭೇಟಿ ನೀಡದ ಗೃಹಸಚಿವರ ನಡೆ ನೋವಿನ ಸಂಗತಿಯಾಗಿದೆ. ಭೇಟಿ ನೀಡಲು ಗೃಹಸಚಿವರು ತಯಾರಾದ ಸಂದರ್ಭದಲ್ಲಿ ಒಂದು ಕೋಮಿನ ಮುಖಂಡರು ಅವರನ್ನು ಭೇಟಿ ಮಾಡುತ್ತಾರೆ. ಅವರ ಒತ್ತಡಕ್ಕೆ ಮಣಿದು ಗೃಹಸಚಿವರು ಸುಹಾಸ್ ಮನೆಗೆ ಭೇಟಿ ಕಾರ್ಯಕ್ರಮ ರದ್ದು ಮಾಡುತ್ತಾರೆ. ಕನಿಷ್ಟ ಸಾಂತ್ವಾನವನ್ನೂ ಗೃಹಸಚಿವರು ನೀಡಿಲ್ಲ ಇದು ರಾಜ್ಯದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಹರಕೆ: ಬಿಜೆಪಿ ಜಯನಗರ ಬೂತ್ ಸಮಿತಿ ಮತ್ತು ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರ ಸಹಯೋಗದೊಂದಿಗೆ ಕಾರಣಿಕ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಸಂಕಲ್ಪ ಮಾಡಿಕೊಂಡಂತೆ ಮೇ ೧೭ರಂದು ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾದರು.
ಮೂರನೇ ಬಾರಿಗೆ ನರೇಂದ್ರ ಮೋದಿ ಆಯ್ಕೆಯಾಗಿ ಪ್ರಧಾನಿಯಾಗಿ ಸರಕಾರ ನಡೆಸಬೇಕು ಎಂದು ಬಿಜೆಪಿ ಜಯನಗರ ಬೂತ್ ಸಮಿತಿಯವರು ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡಿದ್ದರು. ಅದರಂತೆ ಶನಿವಾರ ಕ್ಷೇತ್ರದಲ್ಲಿ ನಡೆದ ಶ್ರೀ ಕೊರಗಜ್ಜ ನೇಮೋತ್ಸವದಲ್ಲಿ ಬಿ.ವೈ.ವಿಜಯೇಂದ್ರ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿ, ಅಭಯ ನುಡಿ ಪಡೆದರು. ಶ್ರೀ ದೈವದ ಕರಿಗಂಧ ಪ್ರಸಾದವನ್ನು ಸಂಸದ ಬ್ರಿಜೇಶ್ ಚೌಟ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲಾಗುವುದು ಎಂದು ಬೂತ್ ಸಮಿತಿಯವರು ತಿಳಿಸಿದರು.

ಚಕ್ರವರ್ತಿಯಂತೆ ಮೆರೆಯಲಿ: ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳು ಪ್ರಾಪ್ತಿಯಾಗಿದೆ. ಮುಂದೆಯೂ ರಾಜ್ಯ ರಾಜಕೀಯದಲ್ಲಿ ಚಕ್ರವರ್ತಿಯಂತೆ ಮೆರೆಯುವಂತಾಗಲಿ ಎಂದು ಕೊರಗಜ್ಜ ದೈವ ವಿಜಯೇಂದ್ರಗೆ ಅಭಯ ನೀಡಿತು.
ಮಾಜಿ ಸಚಿವ ಎಸ್.ಅಂಗಾರ, ಸಂಸದ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಎಂ.ಎಲ್.ಸಿ. ಕಿಶೋರ್ ಬೊಟ್ಯಾಡಿ, ದೇವಸ್ಥಾನದ ಸಮಿತಿಯವರು, ಭಕ್ತರು ಉಪಸ್ಥಿತರಿದ್ದರು.

Previous articleಬರಲಿದೆ ಹೊಸ 20 ರೂ. ನೋಟು
Next articleಬಂಟ್ವಾಳದಲ್ಲಿ ತಲಾವರಿನಿಂದ ಇರಿತ