ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಜನ ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ, ಆದರೆ ಇದೆಲ್ಲದರ ಮಧ್ಯೆ ನಾಡದ್ರೋಹಿ ಎಂಇಎಸ್ ಶಿವ ಸಮ್ಮಾನ್ ಪಾದಯಾತ್ರೆಯ ಹೆಸರಿನಲ್ಲಿ ಕೈಯಲ್ಲಿ ಭಗವಾ ಧ್ವಜ ಹಿಡಿದುಕೊಂಡು ನಾಡ ವಿರೋಧಿ ಘೋಷಣೆ ಕೂಗುತ್ತ ಬೀದಿ ಬೀದಿ ಸಂಚರಿಸುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ಪ್ರಧಾನಿ ಮೋದಿ ಅವರ ಗಮನ ಸೆಳೆಯುವ ಉದ್ದೇಶವಿಟ್ಟುಕೊಂಡೇ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದಕ್ಕೆ ಜೀವ ತುಂಬುವ ಕೆಲಸ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರವನ್ನೇ ಗುರಿಯಾಗಿಟ್ಟುಕೊಂಡಿರುವ ನಾಡದ್ರೋಹಿಗಳು ಎಂಇಎಸ್‌ನ ಹಳಸಲು ಘೋಷಣೆ ಕೂಗುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಅವರ ಗಮನ ಸೆಳೆಯುವ ಉದ್ದೇಶದಿಂದ ಏನಾದರೂ ಕಿತಾಪತಿ ಮಾಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಷ್ಟೆಲ್ಲ ನಾಡದ್ರೋಹಿಗಳು ಬೀದಿ ರಂಪ ಮಾಡಿದರೂ ಕೂಡ ಪೊಲೀಸರು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
























