ಮತ್ತೆ ಮತದಾರನ ಮುಂದೆ ಮಹದಾಯಿ

0
22
hegde sir

ಇದೊಂದು ಯೋಜನೆ.
ಕರ್ನಾಟಕದ ಕಾವೇರಿ, ಕೃಷ್ಣಾ, ಭದ್ರಾ ನಂತರ ಅತೀ ಹೆಚ್ಚು ಸಂಘರ್ಷಕ್ಕೆ ಇಳಿದು ಸುದ್ದಿಯಾಗಿದ್ದು ಇದೇ. ಕಳೆದ ನಲವತ್ತು ವರ್ಷಗಳಿಂದ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆ ಮತ್ತು ಸ್ಥಳೀಯ ಚುನಾವಣೆಗಳಲ್ಲಿ (ಲೋಕಲ್ ಬಾಡೀಸ್) ಈ ಯೋಜನೆಯೇ ಕೇಂದ್ರ ಬಿಂದು. ಆರೆಂಟು ಸರ್ಕಾರಗಳು ಬಂದವು. ಹೋದವು. ಹದಿನಾಲ್ಕು ಮುಖ್ಯಮಂತ್ರಿಗಳು ಈ ಯೋಜನೆಯ ಹೆಸರಿನಲ್ಲಿಯೇ ರಾಜಕಾರಣ ನಡೆಸಿದರು.
ಹಾಗಿದ್ದೂ ಹೊಸ ಹೊಸ ಶಾಸಕರು, ಪ್ರತಿನಿಧಿಗಳು ಈ ಯೋಜನೆಯ ಹೆಸರಿನಲ್ಲೇ ಬೆಳೆದರು. ಯೋಜನೆ ಇವರನ್ನೆಲ್ಲ ಬೆಳೆಸಿದೆ. ಆದರೆ ಯೋಜನೆ ಮಾತ್ರ ಹೇಗಿತ್ತೋ ಹಾಗೇ ಇದೆ. ಅದೇ ಕಳಸಾ- ಬಂಡೂರಿ ಮಹಾದಾಯಿ ಯೋಜನೆ !!
೧೯೮೦ರಿಂದ ಮಹದಾಯಿ ನದಿಯಲ್ಲಿ ರಾಜಕಾರಣ ನಡೆಸಿ ಕದಡಿದ್ದಾರೆ. ಈ ಯೋಜನೆ ಹೆಸರಲ್ಲಿ ಬೇಳೆ ಬೇಯಿಸಿಕೊಂಡಿದ್ದಾರೆ.
ಮಹದಾಯಿ ಗುಂಡೂರಾಯರಿಂದ ಬಸವರಾಜ ಬೊಮ್ಮಾಯಿವರೆಗಿನ ಎಲ್ಲರಿಗೂ ಮಹಾತಾಯಿ. ಮತಗಳಿಕೆಯ ಬ್ಯಾಂಕ್. ಎಲ್ಲ ಸರ್ಕಾರಗಳೂ, ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಜೆಡಿಎಸ್ ಇರಲಿ, ಮಹದಾಯಿ ವಿವಾದದ ನಾಮಬಲ ಬೇಕು. ವಸ್ತು, ವಾಸ್ತವ, ವ್ಯವಹಾರ ಎಲ್ಲವನ್ನೂ ಮಹದಾಯಿ ಕರ್ನಾಟಕದ ರಾಜಕಾರಣಕ್ಕೆ, ವಿಶೇಷವಾಗಿ ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ನೀಡಿ ಸೊಂಪಾಗಿ ಬೆಳೆಸಿದೆ. ಹಾಗಂತ ಮಹದಾಯಿ ನೀರು ಕಿತ್ತೂರು ನಾಡಿನ ಜನರಿಗೆ ತೊಟ್ಟೂ ಸಿಕ್ಕಿಲ್ಲ.
ಏನೆಲ್ಲ ರಾಜಕಾರಣ ನಡೆದು ಹೋದವು… ಒಂದು ನದಿ ನೀರಿನ ಸುತ್ತ…!? ಯಾವ್ಯಾವ ಅದ್ಭುತ ಪ್ರತಿಭೆಗಳು ವಿಧಾನಸೌಧಕ್ಕೆ ಲಗ್ಗೆ ಇಟ್ಟವು..? ಸ್ಥಳೀಯ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದವರೆಗೆ, ಕಣಕುಂಬಿ ಪಂಚಾಯ್ತಿಯಿಂದ ಹಿಡಿದು ವಿಧಾನಸಭೆ- ಸಂಸತ್ತಿನವರೆಗೆ; ಪಕ್ಕದ ಗೋವಾ, ಮಹಾರಾಷ್ಟ್ರ ವಿಧಾನಸಭೆಗಳಲ್ಲಿ, ಭೀಮಗಡ ದಂಡಕಾರಣ್ಯದಿಂದ ಹಿಡಿದು ದೇಶದ ಅತ್ಯುನ್ನತ ಪರಿಸರ ಮಂತ್ರಾಲಯದವರೆಗೆ ಎಲ್ಲೆಡೆಯೂ ಮಹದಾಯಿ, ಅದರ ಮಡಿಲ ಮಕ್ಕಳಾದ ಕಳಸಾ ಬಂಡೂರಿ, ಸದ್ದು ಮಾಡಿ ಅಬ್ಬರಿಸಿ ಬೊಬ್ಬರೆದಿವೆ.
ಈ ಒಂದು ಯೋಜನೆ ಕರ್ನಾಟಕದ ಇತ್ತೀಚಿನ ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೆ ಮೂಲವಾಗಿದೆ ಹಾಗೂ ಚುನಾವಣೆಯ ವಸ್ತುವಾಗಿದೆ. ೧೯೮೦ರಲ್ಲಿ ಮಹದಾಯಿ, ೨೦೦೦ದಲ್ಲಿ ಕಳಸಾ ಬಂಡೂರಿ ಹೆಸರಿನಲ್ಲಿ ನಡೆದಿದ್ದು ಬರೀ ರಾಜಕಾರಣವೇ. ದುರ್ದೈವ ಎಂದರೆ ಯೋಜನೆಯ ಪ್ರತಿ ಹಂತದಲ್ಲೂ ರಾಜ್ಯ- ಕೇಂದ್ರ ಸರ್ಕಾರಗಳ ವಿಭಿನ್ನ ನಡೆ.
ಇಲ್ಲಿಂದ ಅವರ ಮೇಲೆ, ಅವರಿಂದ ಇಲ್ಲಿನವರ ಮೇಲೆ ಫೂತ್ಕಾರಗಳಷ್ಟೇ. ೧೭೫ ಕೋಟಿ ರೂಪಾಯಿಯ ಒಂದು ಯೋಜನೆ ಈಗ ಕೇವಲ ೩ ಟಿಎಂಸಿಎಫ್‌ಟಿಯಷ್ಟು ನೀರು ಪಡೆಯಲು ೫೮೦೦ ಕೋಟಿ ರೂಪಾಯಿಯವರೆಗೆ ಯೋಜನಾ ವೆಚ್ಚವನ್ನು ಹೆಚ್ಚಿಸಿಕೊಂಡು ನಿಲ್ಲುವಂತಾಗಿದೆ.
ರಾಜ್ಯ ವಿಧಾನಸಭೆಯ ಏಳು ಚುನಾವಣೆಗಳು, ಜಿಲ್ಲಾ ಪಂಚಾಯ್ತಿ ಮತ್ತು ಸಂಸತ್ತಿನ ಆರು ಚುನಾವಣೆಗಳಲ್ಲಿ ಇದೇ ವಿಷಯವನ್ನು ಮುಂದುವರಿಸಿಕೊಂಡು ಬಂದ ಖ್ಯಾತಿ' ನಮ್ಮ ರಾಜಕಾರಣಿಗಳದ್ದು. ಪ್ರತಿ ಚುನಾವಣೆಯಲ್ಲೂ ಅವರ ಮೇಲೆ ಇವರು, ಇವರ ಮೇಲೆ ಅವರು !! ಹಾಗಂತ ಆಶ್ವಾಸನೆಗಳು, ವೀರಾವೇಶಗಳು, ನಾವು ಮಾಡಿಯೇ ಸಿದ್ಧ ಎನ್ನುವವರು, ಜನರ ಕಣ್ಣೆದುರಿಗೇ ಪ್ರಮಾಣ ಪತ್ರ, ಮಂಜೂರಾತಿ ಪತ್ರ, ಪ್ರಣಾಳಿಕೆಗಳು, ಬಜೆಟ್‌ಗಳು ಇವೆಲ್ಲವನ್ನೂ ಬಿಚ್ಚಿಡುವ ಬೊಬ್ಬೆ ಇಡುವ ಕಾರ್ಯಕ್ಕೇನೂ ಕಡಿಮೆಯಾಗಿಲ್ಲ. ಇಡೀ ದೇಶದಲ್ಲಿ ಮೂರು ವರ್ಷಗಳ ಕಾಲ ಧರಣಿ ಸತ್ಯಾಗ್ರಹ ನಡೆದ ಇತಿಹಾಸವಿದ್ದರೆ ಅದು ಈ ಯೋಜನೆಗಾಗಿ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಅಧಿಕಾರಕ್ಕೆ ಬಂದ ೪೮ ಗಂಟೆಗಳಲ್ಲಿ ಈ ಯೋಜನೆಗೆ ಮಂಜೂರಾತಿ ದೊರಕಿಸಿಕೊಡುತ್ತೇನೆ. ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುತ್ತೇನೆ’ ಎಂದು ಬಿ.ಎಸ್ ಯಡಿಯೂರಪ್ಪ ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು…. ಅವರೇ ಅಧಿಕಾರ ಬಿಟ್ಟರಷ್ಟೇ…ಅವರು ಈಗ ರಕ್ತದ ಹನಿಯನ್ನು ತಮ್ಮ ಒಡನಾಡಿ ಶೆಟ್ಟರ್ ಸೋಲಿಸಲು ವ್ಯಯಿಸಲಿದ್ದಾರಂತೆ…! ಮತ್ತೊಬ್ಬರು ದೇವರ ಮೇಲೆ ಪ್ರಮಾಣ ಮಾಡುತ್ತಾರೆ. ಇನ್ನೊಬ್ಬರು ಇದನ್ನು ಮೋಸ ಎನ್ನುತ್ತಾರೆ.
ಮಹದಾಯಿ- ಕಳಸಾ ಬಂಡೂರಿ, ಈ ಸಾರೆಯ ಎಲ್ಲ ಪಕ್ಷಗಳ ಚುನಾವಣೆಯ ಇಷ್ಯೂ ಆಗಿದೆ. ಮತ್ತೆ ಅವೇ ಆಶ್ವಾಸನೆಗಳು… ಕಳಸಾ ಬಂಡೂರಿ ಮಹದಾಯಿಯ ಬಗ್ಗೆ ನನಗಿರುವಷ್ಟು ಕಾಳಜಿ ಇನ್ಯಾರಿಗೆ ಇದೆ ಎಂದು ತಿಂಗಳುಗಟ್ಟಲೇ ಪಾದಯಾತ್ರೆ ನಡೆಸಿದ್ದ ಬಸವರಾಜ ಬೊಮ್ಮಾಯಿ ಒಂದೂವರೆ ವರ್ಷದಿಂದ ಮುಖ್ಯಮಂತ್ರಿ.
ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದ ಬಿ.ಎಸ್.ಯಡಿಯೂರಪ್ಪ ನಾಲ್ಕು ಸಾರೆ ಮುಖ್ಯಮಂತ್ರಿ. ನನ್ನನ್ನು ಚುನಾಯಿಸಿ. ಕಳಸಾ ನೀರನ್ನು ಧಾರವಾಡ- ಗದಗ ಭಾಗಗಳಿಗೆ ಹರಿಸುತ್ತೇನೆ ಎಂದ ಪ್ರಲ್ಹಾದ ಜೋಶಿ ಈಗ ಕೇಂದ್ರ ಸಚಿವರು. ಕಳಸಾ ಬಂಡೂರಿಗೆ ಅಡಿಗಲ್ಲನ್ನಿಟ್ಟಿದ್ದೇ ನಮ್ಮ ಸರ್ಕಾರ ಎಂದು ಘೋಷಿಸಿದ ಕುಮಾರಸ್ವಾಮಿ ಈಗ ಮತ್ತೆ ನನ್ನದೇ ಸರ್ಕಾರ ಬರಲಿದೆ ಎನ್ನುತ್ತಾರೆ. ತಮ್ಮವರೆಗೆ ನಿಯೋಗ ಬಂದರೂ ಕೇಳದ- ಆಲಿಸದ ಪ್ರಧಾನಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಕಳಸಾ ರಾಜಕಾರಣಕ್ಕೆ ಹೊಸ ರೂಪ ಕೊಟ್ಟ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಹೊಂಗನಸಿನಲ್ಲಿದ್ದಾರೆ. ಕಳಸಾ ಬಂಡೂರಿಯಿಂದಲೇ ವಿಧಾನಸೌಧ ಪ್ರವೇಶಿಸಿದ್ದ ಸಿ.ಸಿ.ಪಾಟೀಲ, ಎಚ್.ಕೆ.ಪಾಟೀಲ, ಕಳಕಪ್ಪ ಬಂಡಿ, ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಎನ್.ಎಚ್.ಕೋನರಡ್ಡಿ ಹೀಗೆ ಸಾಲು ಸಾಲು ಮಂದಿ ಮತ್ತೆ ಜನರ ಮುಂದೆ ಕಳಸಾ ಬಂಡೂರಿ ನೀರನ್ನು ಮಲಪ್ರಭೆಗೆ ಜೋಡಿಸುವ ಹೊಣೆ ತಮ್ಮದೆಂಬ ಆಶ್ವಾಸನೆಯನ್ನು ತೋರಿಸುತ್ತ ನಿಂತಿದ್ದಾರೆ !
ನ್ಯಾಯಾಧೀಕರಣದ ತೀರ್ಪು ಬಂದು ಎರಡು ವರ್ಷವಾದರೂ ಡಿಪಿಆರ್ (ವಿಸ್ತೃತ ಕ್ರಿಯಾ ಯೋಜನೆ) ರೂಪಿಸದೇ, ಪರಿಸರ ಇಲಾಖೆಯ ಮಂಜೂರಾತಿ ಪಡೆಯದ- ನೀಡದ ಡಬಲ್ ಎಂಜಿನ್ ಸರ್ಕಾರದ ಅವಸ್ಥೆ ಇದು. ವಿಚಿತ್ರವೆಂದರೆ ಡಬಲ್ ಎಂಜಿನ್ ಸರ್ಕಾರವನ್ನು ಮತ್ತೆ ಚುನಾಯಿಸಿ ಎನ್ನುವವರು ಈ ಯೋಜನೆ ಬಗ್ಗೆ ಮಾತನಾಡುವುದೇ ಇಲ್ಲ.!
ಮತ್ತೆ ಜನರ ಮುಂದೆ ಬಹುಶಃ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ಕಳಸಾ- ಬಂಡೂರಿ ಮಹದಾಯಿ ಪ್ರಸ್ತಾಪವಾಗಲಿದೆ. ಸದ್ಯದ ಸ್ಥಿತಿ ನೋಡಿದರೆ ಇನ್ನೂ ಮರ‍್ನಾಲ್ಕು ಚುನಾವಣೆಗೆ ಇದೇ ಮಹದಾಯಿ ವಸ್ತುವಾಗಬಹುದೇನೋ?
ಈಗ ಈ ವಿಷಯ ಪ್ರಸ್ತಾಪ ಏಕೆಂದರೆ ಒಂದು ಕಳಸಾ ಬಂಡೂರಿ ಮಹದಾಯಿಯದ್ದಷ್ಟೇ ಅಲ್ಲ. ಎಲ್ಲ ಯೋಜನೆಗಳ ಸ್ಥಿತಿಯೂ ಇದೇ ರೀತಿಯಾಗಿರುವುದು. ಕಾರಂಜಾದಿಂದ ಹಿಡಿದು ವಾರಾಹಿಯವರೆಗೆ ನೀರಾವರಿ ಯೋಜನೆಗಳ ಗತಿ ಆಶ್ವಾಸನೆಗಳಿಗಷ್ಟೇ ಸೀಮಿತಗೊಂಡಿದೆ. ಹಾಗೇ ಕಳೆದ ಆರು ಚುನಾವಣೆಗಳ ಪ್ರಣಾಳಿಕೆ ತೆರೆದಿಡಿ, ಅದೇ ವಿಷಯಗಳು.. ಅದೇ ಭರವಸೆಗಳು!
.ಹೀಗಾಗಿ ಜನತೆಗಂತೂ ಯಾರ ಆಶ್ವಾಸನೆ, ಯಾವ ಭರವಸೆಗಳ ಮೇಲೆ ನಂಬಿಕೆಯೇ ಇಲ್ಲ.
ಹಿಂದೊಂದು ಕಾಲವಿತ್ತು. ಚುನಾವಣಾ ಪ್ರಣಾಳಿಕೆ ಎಂದರೆ ಮತದಾರರಿಗೆ ನಾವು ನೀಡುವ ಪ್ರತಿಜ್ಞಾ ಪತ್ರ ಎನ್ನುತ್ತಿದ್ದರು. ಸರ್ಕಾರ ಆಯ್ಕೆಯಾದ ನಂತರ ಭರವಸೆ- ಪ್ರತಿಜ್ಞಾ ಪತ್ರಗಳೆಲ್ಲ ಮೂಲೆಗುಂಪೇ. ನಂತರದ ಆದ್ಯತೆಗಳೇ ಬೇರೆ.
ತಿಂಗಳ ಹಿಂದೆ ರಾಜ್ಯಾದ್ಯಂತ ಮೂರು ಯೋಜನೆಗಳ ಅನುಷ್ಠಾನದ ಕಾರ್ಯಕ್ರಮಗಳು ಜೋರಾಗಿ ನಡೆದವು. ಮೊದಲನೆಯದ್ದು ಬಂಜಾರಾ ಸಮುದಾಯ ವಾಸಿಸುವ ತಾಣಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಎನ್ನುವ ಘೋಷಣೆ. ಬೀದರ್ ಕಾರ್ಯಕ್ರಮದ ನಂತರ ಇದುವರೆಗೂ ಈ ಬಗ್ಗೆ ಗೆಝೆಟ್ ಅಧಿಸೂಚನೆಯೇ ಆಗಿಲ್ಲ. ಜನರಿಗೆ ಘೋಷಣಾ ಪತ್ರಗಳನ್ನು ನೀಡಿದ್ದು ಹೇಗಿತ್ತೋ ಹಾಗೇ ಉಳಿದಿದೆ. ಇನ್ನೊಂದು ವಸತಿ ಯೋಜನೆ. ಕೊನೇ ಕ್ಷಣದಲ್ಲಿ ಶಾಸಕರುಗಳೇ ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ ಸಾಂಕೇತಿಕವಾಗಿ ಮನೆ ಹಂಚಿದರು. ಸಾಂಕೇತಿಕತೆಯ ನಂತರ ಚುನಾವಣೆಯಲ್ಲಿ ನಮಗೆ ಮತ ನೀಡಿದರೆ ಮಾತ್ರ ಮನೆಗಳ ಹಂಚಿಕೆ ಎಂದು ಮತಗಳಿಕೆಯತ್ತ ಗಮನ ಹರಿಸಿದರು.ಸ್ಮಾರ್ಟ್ ಸಿಟಿ, ಬಿಯಾಂಡ್ ಬೆಂಗಳೂರು, ವಿದ್ಯುತ್- ಅಕ್ಕಿ ಗ್ಯಾರಂಟಿ ಇತ್ಯಾದಿಗಳೇ ಈಗ ಜನಾಕರ್ಷಿಸುತ್ತಿರುವಾಗ, ಕಳಸಾ- ಕಾರಂಜಾ, ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಬದುಕಿನ ಸಮಸ್ಯೆ, ಮೂಲಭೂತ ಸೌಲಭ್ಯಗಳ ಕೊರತೆ… ಇವಕ್ಕೆಲ್ಲಿದೆ ಜಾಗ? ಇವನ್ನು ಕೇಳುವ ಅವಕಾಶ?
ಜನ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಅಸಹ್ಯ ಪಡುವಷ್ಟು ವ್ಯಂಗ್ಯವಾಡುತ್ತಿದ್ದಾರೆ.

Previous articleನೂರಕ್ಕೆ ನೂರು ಶೆಟ್ಟರ ಗೆಲ್ತಾರೆ…!
Next articleಚಂಚಲ ಮನಸ್ಸು ಎಂದಿಗೂ ಬೇಡ