ಮತ್ತೆ ನೈತಿಕ ಪೊಲೀಸ್ ಗಿರಿ: ಇಬ್ಬರ ಸೆರೆ

0
17

ಮಂಗಳೂರು: ಕಳೆದ ಸಂಜೆ ಪಣಂಬೂರು ಬೀಚ್‌ಗೆ ವಿಹಾರಕ್ಕೆ ಬಂದಿದ್ದ ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಒಬ್ಬನ ಮೇಲೆ ಹಲ್ಲೆ ನಡೆಸುವ ಮೂಲಕ ನೈತಿಕ ಪೊಲೀಸ್ ಗಿರಿ ಕೃತ್ಯ ನಡೆದಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಅಳಪೆ ನಿವಾಸಿ ದೀಕ್ಷಿತ್(೩೨) ಹಾಗೂ ಲಾಯ್ಡ್ ಪಿಂಟೋ(೩೨) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್, ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಗರದ ಮೆಡಿಕಲ್ ಕಾಲೇಜೊಂದರ ೧೦ ಮಂದಿ ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಪಣಂಬೂರು ಕಡಲ ತೀರಕ್ಕೆ ತೆರಳಿದ್ದರು. ಇವರಲ್ಲಿ ಆರು ಮಂದಿ ಯುವಕರು ಹಾಗೂ ನಾಲ್ವರು ವಿದ್ಯಾರ್ಥಿನಿಯರಿದ್ದರು. ಇವರಲ್ಲಿ ಯುವಕರು ಬೈಕ್‌ನಲ್ಲಿ ಬೀಚ್‌ಗೆ ಬಂದಿದ್ದು, ಯುವತಿಯರು ಬಸ್‌ನಲ್ಲಿ ಆಗಮಿಸಿದ್ದರು.
ಇವರು ಬೀಚ್‌ನಲ್ಲಿದ್ದ ವೇಳೆ ಅಪರಿಚಿತರು ಇವರ ಚಲನವಲನಗಳನ್ನು ಮೊಬೈಲ್ ಫೋನ್‌ಗಳಲ್ಲಿ ವಿಡಿಯೊ ಮಾಡಿದ್ದರು. ವಿದ್ಯಾರ್ಥಿಗಳು ಇದನ್ನು ಗಮನಿಸಿದ್ದು ತಮ್ಮ ಪಾಡಿಗೆ ತಾವು ಇದ್ದು ಹೋಗಿದ್ದಾರೆ ಎನ್ನಲಾಗಿದೆ. ನಂತರ ಯುವಕರು ಬೈಕ್‌ನಲ್ಲಿ, ಯುವತಿಯರು ಬಸ್‌ನಲ್ಲಿ ಮರಳಿದ್ದಾರೆ. ಈ ವೇಳೆ ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿನಿಯರು ತೆರಳಿದ್ದಾರೆ ಎಂದು ಆರೋಪಿಸಿ ತಂಡವೊಂದು ಬೈಕ್‌ನಲ್ಲಿ ವಿದ್ಯಾರ್ಥಿಗಳನ್ನು ಹಿಂಬಾಲಿಸಿದೆ. ರಾತ್ರಿ ವೇಳೆ ಬಿಜೈ ಕಾಪಿಕಾಡ್ ಬಳಿ ಬೈಕ್ ಅಡ್ಡಗಟ್ಟಿ ವಿದ್ಯಾರ್ಥಿ ಮಹಮ್ಮದ್ ಹಫೀಸ್(೨೦) ಎಂಬಾತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಈ ಮಧ್ಯೆ ಚಿಲಿಂಬಿಯಲ್ಲಿ ಬಸ್‌ನಿಂದ ಇಳಿದು ತನ್ನ ಪಿಜಿ ಕಡೆ ತೆರಳುತ್ತಿದ್ದ ವೇಳೆ ಪಣಂಬೂರು ಬೀಚ್‌ನಲ್ಲಿ ಹಿಂಬಾಲಿಸಿದ್ದ ಅದೇ ಅಪರಿಚಿತರು ಮತ್ತೆ ಹಿಂಬಾಲಿಸಿ ಬಂದು ಯುವತಿಗೆ ಬೆದರಿಸಿದ್ದಾರೆ. ‘ಕೇರಳ ಸ್ಟೋರಿ’ ನೋಡಿಯೂ ನಿಮಗೆ ಬುದ್ಧಿ ಬರುವುದಿಲ್ವಾ ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿಗಳು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Previous articleಅಧಿಕಾರಕ್ಕೆ ಬಂದಿದ್ದೇ ಲೂಟಿಗಾಗಿ
Next articleಪೂರ್ಣವಾಗಿ ಪಠ್ಯ ಪುಸ್ತಕ ಪರಿಷ್ಕರಣೆ