ಮಂಗಳೂರು ಪೊಲೀಸ್ ಆಯುಕ್ತರಿಗೆ ಸಮನ್ಸ್

0
24

ಮಂಗಳೂರು: ಮೂಲ್ಕಿಯ ಬ್ಯಾಂಕೊಂದರ ಮುಂದೆ ಜೂನ್ ೫, ೨೦೨೦ರ ಹಾಡುಹಗಲೇ ಸುಳ್ಯ ಮೂಲದ ಉದ್ಯಮಿ ಅಬ್ದುಲ್ ಲತೀಫ್ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಇನ್ನೂ ಬಂಧಿಸದ ಪೊಲೀಸರ ಕ್ರಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ಮೂಲ್ಕಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರಿಗೆ ರಾಜ್ಯ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಬಂಧನ ವಿಳಂಬದ ಬಗ್ಗೆ ಫೆ.೧೩ರೊಳಗೆ ವರದಿ ಒಪ್ಪಿಸುವಂತೆ ಸೂಚಿಸಲಾಗಿದೆ.
ಉದ್ಯಮಿ ಅಬ್ದುಲ್ ಲತೀಫ್ ಕೊಲೆ ಪ್ರಕರಣದಲ್ಲಿ ೧೦ ಮಂದಿ ಆರೋಪಿಗಳ ಪೈಕಿ ೯ ಮಂದಿಯ ಬಂಧನವಾಗಿದೆ. ಉಳಿದ ಒಬ್ಬ ಆರೋಪಿಯ ಬಂಧನವಾಗದ ಕಾರಣ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ನಗರ ಪೊಲೀಸ್ ಆಯುಕ್ತರು, ಮೂಲ್ಕಿ ಎಸ್‌ಎಚ್‌ಒ ವಿರುದ್ಧ ಹೈಕೋರ್ಟ್‌ನಲ್ಲಿ ಇಮ್ರಾನ್ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯವಾದಿ ಬಾಲಕೃಷ್ಣ ಎಂ. ಆರ್. ವಾದಿಸಿದ್ದರು
ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿ ಪಕ್ಷಿಕೆರೆಯ ಮುಸ್ತಫಾನಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೊಲೆಯಾದ ಅಬ್ದುಲ್ ಲತೀಫ್ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಸ್ತಫಾನ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಅತನನ್ನು ಬಂಧಿಸದ ಕಾರಣ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆ ಹಿನ್ನಲೆಯಲ್ಲಿ ಫೆ.೧೩ರಂದು ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

Previous articleಅಂಜನಾದ್ರಿ ಅಭಿವೃದ್ಧಿಗೆ ೫ ಸಾವಿರ ಕೋಟಿ: ರೆಡ್ಡಿ
Next articleಮರಳು ದಂಧೆ:ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಖಾದರ್