ಕೋಲಾರ: ಭಯೋತ್ಪಾದಕರು ಗನ್ ಹಿಡಿದು ನಮ್ಮ ಮನೆ ಬಾಗಿಲಿಗೆ ಬಂದು ನಿಂತಾಗ ಅವರಿಗೆ ಶಾಂತಿ ಪಾಠ ಬೋಧಿಸುವುದು ವ್ಯರ್ಥ. ಅವರಿಗೆ ಗನ್ ಮೂಲಕವೇ ಉತ್ತರ ಕೊಡಬೇಕು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸ್ವಾಮೀಜಿ, ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ತೀಕ್ಷ್ಣವಾಗಿ ನುಡಿದರು. ಮನೆ ಬಾಗಿಲಿಗೆ ಭಯೋತ್ಪಾದಕರು ಬಂದಾಗಲೂ ಶಾಂತಿಮಂತ್ರ ಬೋಧಿಸುವುದು ಅಗತ್ಯವಿಲ್ಲ. ಗನ್ ಕಿತ್ತುಕೊಂಡು ಅವರನ್ನು ಮುಗಿಸಬೇಕು ಎಂದು ಹೇಳಿದರು.
ಗಡಿಯಲ್ಲಿರುವ ಭಯೋತ್ಪಾದನೆ ನಾಡಿನ ಮಧ್ಯಕ್ಕೆ ಬರಬಾರದೆಂದರೆ ಛಡಿ ಏಟು ಬೀಸಲೇಬೇಕು. ಸಮಸ್ಯೆಯು ನಮ್ಮ ಬುಡಕ್ಕೆ ಬಂದಾಗಲೇ ಸಮಸ್ಯೆಯ ಆಳ ಅರಿವಾಗುತ್ತದೆ ಎಂದರು. ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಯುದ್ಧವೇ ಅನಿವಾರ್ಯ. ಯುದ್ಧಕ್ಕೆ ನಾವೆಲ್ಲಾ ಸಿದ್ಧರಾಗಬೇಕು. ಅವರಿಗೆ ಬುದ್ಧಿ ಬರಬೇಕಾದರೆ ಚಾಟಿ ಏಟು ಬೀಳಲೇಬೇಕು. ಭಾರತವು ಶಾಂತಿಗೂ, ಕ್ರಾಂತಿಗೂ ಸಿದ್ಧ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಶತಾಯಗತಾಯ ಭಯೋತ್ಪಾದನೆ ನಿಲ್ಲಲೇಬೇಕು. ನಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಸುಂದರ ದಿನಗಳನ್ನು ದೊರಕಿಸಲು ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ತಿಳಿಸಿದರು.
ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ ಧರ್ಮ ರಕ್ಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಶರಣರ ವಚನಗಳು, ವಿಚಾರಧಾರೆಗಳ ಸಂಬಂಧ ಸಂಘರ್ಷ ಶುರುವಾದಾಗ ಶರಣರು ಕೂಡ ಕೈಯಲ್ಲಿ ಖಡ್ಗ ಹಿಡಿದರು. ಅದರಿಂದಾಗಿಯೇ 900 ವರ್ಷ ಕಳೆದರೂ ವಚನ ಸಾಹಿತ್ಯ ಉಳಿದುಕೊಂಡಿವೆ. ಧರ್ಮ ರಕ್ಷಣೆಗೆ ಕ್ರಾಂತಿ ಅನಿವಾರ್ಯ ಎಂದು ಪ್ರತಿಪಾದಿಸಿದರು.