ಬ್ರಾಹ್ಮಣ ತಿಳಿಗೊಳ ಈಗ ಕದಡಿದ ನೀರು

0
15

ಇದು ಖಂಡಿತ ಅನಿರೀಕ್ಷಿತವಲ್ಲ.
ಚುನಾವಣೆಯ ಹೊಸ್ತಿಲಿನಲ್ಲಿರುವ ಕರ್ನಾಟಕದ ರಾಜಕಾರಣ ಜಾತಿ, ಧರ್ಮದ ಜೊತೆಗೆ ವೈಯಕ್ತಿಕ ಬದುಕು ಪೂರ್ವಾಪರಗಳನ್ನು ಎಳೆದು ತಂದು ಬೆತ್ತಲಾಗಿಸುವ ನಿರೀಕ್ಷೆ ಪ್ರಜೆಗಳಿಗೆ ಇದ್ದೇ ಇದೆ. ಆದರೆ ಇದು ಚುನಾವಣೆ ಘೋಷಣೆಗೆ ಎರಡು ತಿಂಗಳ ಮೊದಲೇ ಶುರುವಾಗುತ್ತಿದೆ ಎನ್ನುವುದು ಸ್ವಲ್ಪ ಮಟ್ಟಿನ ಅನಿರೀಕ್ಷಿತ. ಬರ ಬಿರುಸು ರಾಜಕೀಯ ತರಾತುರಿ ಎನ್ನಬಹುದೇನೋ…!?
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಬ್ರಾಹ್ಮಣ ಆಗುತ್ತಾರೆ. ಅದೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾರಿರುವ ಹಿಂದೆ ಇರುವುದು ಬಿಜೆಪಿ ಕೋಟೆಯಲ್ಲಿ ಡೈನಮೈಟ್ ಸಿಡಿಸುವ ತಂತ್ರಗಾರಿಕೆ ಎನ್ನುವುದು ಸ್ಪಷ್ಟ. ಇಷ್ಟಕ್ಕೇ ನಿಲ್ಲದ ಕುಮಾರಸ್ವಾಮಿ ಜೋಶಿಯವರ ಮತ್ತು ಅವರ ಜಾತಿ ಸಮುದಾಯದ ಬಗ್ಗೆ ಯಾವುದೋ ಇತಿಹಾಸ ಹೇಳುವ ಭರದಲ್ಲಿ, ಜಾತಿ ಧರ್ಮಗಳ ನಡುವೆ ಮತ್ತು ಪ್ರತಿಪಾದನೆಯ ಅನುಯಾಯಿಗಳಲ್ಲಿ ಅನುಮಾನದ ಬೀಜವನ್ನೂ ಬಿತ್ತಿದ್ದಾರೆ. ಕುಮಾರಸ್ವಾಮಿ ಪ್ರಬುದ್ಧ ರಾಜಕಾರಣಿ. ಉದ್ದೇಶಪೂರ್ವಕವಾಗಿಯೇ ಜೋಶಿ ಮತ್ತು ಬ್ರಾಹ್ಮಣರನ್ನು ಪ್ರತ್ಯೇಕಿಸುವ ಮತ್ತು ತಮ್ಮ ಕೋಟೆಯನ್ನು ರಕ್ಷಿಸಿಕೊಳ್ಳುವ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ ಎನ್ನುವುದು ಸ್ಪಷ್ಟ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿಸುತ್ತಾರೆ. ಅದೂ ಪ್ರಲ್ಹಾದ ಜೋಶಿಯವರನ್ನು ಸಿಎಂ ಮಾಡ್ತಾರೆ. ಹಾಗಾಗಿ ಒಕ್ಕಲಿಗರೇ, ಲಿಂಗಾಯತರೇ, ದಲಿತ ನಾಯಕರೇ ಎಚ್ಚೆತ್ತುಕೊಳ್ಳಿ’ ಎನ್ನುವ ಮೂಲಕ ಈ ಸಮುದಾಯಗಳ ಮಂದಿಯ ಹಾಗೂ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟವರ ತಲೆಯಲ್ಲಿ ಹುಳವನ್ನು ವ್ಯವಸ್ಥಿತವಾಗಿ ಬಿಟ್ಟಿದ್ದಾರೆ.
ಈ ರಾಜ್ಯದ ಬಹುಸಂಖ್ಯಾತ ಸಮುದಾಯಗಳಾದ ಲಿಂಗಾಯತರು ಎರಡು ದಶಕಗಳಿಂದ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಆ ಸಮುದಾಯದ ಮಠಾಧೀಶರ ಸಂಘಟನೆ ಹಾಗೂ ಆಯಾ ಕಾಲಘಟ್ಟದ ಸಾಂದರ್ಬಿಕ ರಾಜಕಾರಣದ ಸಂಯೋಜನೆ ಕಾರಣ. ಒಕ್ಕಲಿಗ ಸಮುದಾಯ ದೇವೇಗೌಡರ ರಾಜಕಾರಣ ಸುತ್ತ ಹಾಗೂ ಅವರ ಕುಟುಂಬದ ಅಂಕೆಯಲ್ಲಿಯೇ ಬಹುತೇಕ ಇದೆ. ಒಕ್ಕಲಿಗರ ಕೋಟೆಯಲ್ಲಿಯೇ ತನ್ನ ಅಸ್ತಿತ್ವ ಹುಡುಕುವ ಸ್ಥಿತಿಯನ್ನು ಕುಮಾರಸ್ವಾಮಿ ಮತ್ತು ಜನತಾದಳಕ್ಕೆ ತಂದಿಟ್ಟಿರುವ ಬಿಜೆಪಿ ಹಣಿಯಲು ಆರ್ ಎಸ್ ಎಸ್ ಚಿಪ್ಪಿನಲ್ಲಿಟ್ಟಿರುವ ಬ್ರಾಹ್ಮಣ ಮುಖ್ಯಮಂತ್ರಿ ಗುಟ್ಟನ್ನು ತೆರೆದಿಟ್ಟಿರುವ ಹಿಂದಿನ ತಂತ್ರಗಾರಿಕೆ ಎನ್ನುವುದು ಸ್ಪಷ್ಟ.
ಈ ಹೇಳಿಕೆಯ ನಂತರ ಎರಡೂ ಸಮುದಾಯಗಳಲ್ಲಿ ಯಡಿಯೂರಪ್ಪರವರನ್ನು ನಿರ್ವಿಣ್ಯರಾಗಿರಿಸಿರುವುದು, ವಿಜಯೇಂದ್ರರನ್ನು ಕಳಂಕಿತರನ್ನಾಗಿ ಬಿಂಬಿಸುವುದು, ಜಗದೀಶ ಶೆಟ್ಟರನ್ನು ನಿರ್ಲಕ್ಷಿಸುತ್ತಿರುವುದು, ಅಶೋಕ, ರವಿ ಮುಂತಾದವರ ಶ್ರಮ ಮಾತ್ರಕ್ಕೆ ಬಳಕೆ ಯಂತ್ರವನ್ನಾಗಿಸಿರುವುದನ್ನು, ಈಶ್ವರಪ್ಪ, ನಿರಾಣಿ, ಸವದಿ ಅವರನ್ನು ಬದು, ಹೊಲ ಕಾಯುವ ಬೆರ್ಚಿನಂತೆ ನಿಲ್ಲಿಸಿರುವುದನ್ನು ಜನ ನೆನಪಿಸಿಕೊಳ್ಳಲಾರಂಭಿಸಿದ್ದಾರೆ ಎನ್ನುವುದು ದಿಟ.
ಬ್ರಾಹ್ಮಣ ಅಥವಾ ಜೋಶಿ ಸಾಮರ್ಥ್ಯವಿದ್ದರೆ ಮುಖ್ಯಮಂತ್ರಿ ಏಕಾಗಬಾರದು ಎನ್ನುವ ನೇರ ಪ್ರಶ್ನೆಯನ್ನು ಸಮುದಾಯ ಕೇಳಿದ್ದರಿಂದ ಈಗ ಆ ಚಿಂತನೆಯ ಮುನ್ನೆಲೆಗೆ ಬಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಪ್ರಲ್ಹಾದ ಜೋಶಿ ಪೇಶ್ವೆ ವಂಶಸ್ಥರು, ಅವರ ಡಿಎನ್‌ಎ ಗೋಡ್ಸೆ ಸಂತತಿಯದು, ಗಾಂಧಿ ಕೊಂದ ವಂಶಸ್ಥರದ್ದು ಎನ್ನುವ ಮೂಲಕ ಕುಮಾರಸ್ವಾಮಿ ಪೂರ್ಣ ಸ್ಪಷ್ಟ ಮಾಹಿತಿ ಪಡೆಯದೆ ಹರಿಬರಿ ಮಾಹಿತಿಯನ್ನು ತರಾತುರಿಯಲ್ಲಿ ಜೋಶಿ ಡಿಎನ್‌ಎಯನ್ನು ತಪ್ಪಾಗಿ ಪ್ರಸ್ತಾಪಿಸಿದ್ದಾರೆ.
ಜೋಶಿ ಅಪ್ಪಟ ಉತ್ತರ ಕರ್ನಾಟಕದ, ಮೇಲುಸ್ತರದ ವೈಷ್ಣವ ಬ್ರಾಹ್ಮಣ. ಉತ್ತರಾದಿಮಠದ ಭಕ್ತ. ಮಧ್ವ ಸಂಪ್ರದಾಯಸ್ಥ. ಕುಮಾರಸ್ವಾಮಿ ಹೇಳಿದಂತೆ ಪೇಶ್ವೆ, ಚಿತ್ಪಾವನ, ದೇಶಸ್ಥ ಬ್ರಾಹ್ಮಣರಲ್ಲ. ಪ್ರಲ್ಹಾದ ಜನತಾದಳದ ಗೌಡರ ಕುಟುಂಬದ ಪಂಚರತ್ನ ಯಾತ್ರ‍್ರೆಯನ್ನು ನವಗ್ರಹ' ಯಾತ್ರೆ, ಅವರ ಮನೆಯ ಒಂಬತ್ತೂ ಮಂದಿಗೇ ಸ್ಥಾನಮಾನ ಎಂಬ ಟೀಕೆಗೆ ಕುಮಾರಸ್ವಾಮಿ ಸಿಟ್ಟು ಸೆಡವಿನ ಪ್ರತಿಕ್ರಿಯೆ ನೀಡುವ ಭರದಲ್ಲಿ ಈ ಮಟ್ಟಿಗೆ ಎಡವಿದ್ದಾರೆ. ಕುಮಾರಸ್ವಾಮಿ ಬ್ರಾಹ್ಮಣ ತಂತ್ರ ರಾಜಕೀಯ ವಲಯದಲ್ಲಿ ಈಗ ಒಂದೆರಡು- ಮೂರು ಚಿಂತನೆಗಳು ಗರಿಗೆದರಿವೆ. ಕುಮಾರಸ್ವಾಮಿ ಈಗ ಕೇಂದ್ರಬಿಂದು ಎನ್ನುವುದು ನಿಶ್ಚಿತ. ಇದರ ಲಾಭ ಯಾರಿಗೆ? ಹೇಗೆ? ಎನ್ನುವುದರ ಚರ್ಚೆ ಹಾಗೂ ಆಯಾ ಸಮಾಜದ ಕೊಡುಗೆ ಏನೆಂಬ ಮಾತು ಈಗ ಶುರುವಾಗಿದೆ. ಅದೇ ಬ್ರಾಹ್ಮಣ ಸಮುದಾಯದ ಪ್ರಮುಖ ನೇತಾರರ ಹೋರಾಟ, ತ್ಯಾಗ ಬಲಿದಾನಗಳು, ರಾಜಕೀಯ ಮುತ್ಸದ್ದಿಗಳ ಕೊಡುಗೆಯನ್ನು ಪ್ರಸ್ತಾಪಿಸಲಾಗುತ್ತಿದೆ. ತಿಲಕರಿಂದ ಹಿಡಿದು ರಾಮಕೃಷ್ಣ ಹೆಗಡೆಯವರೆಗೆ. ಇದರೊಟ್ಟಿಗೆ ಬ್ರಾಹ್ಮಣರನ್ನೇ ಏಕೆ ಗುರಿಯಾಗಿಸಿಕೊಂಡಿದ್ದೀರಿ? ರಾಜಕಾರಣದ ಸುತ್ತ ಬ್ರಾಹ್ಮಣ ಸಮುದಾಯವನ್ನು ಅಸ್ಪೃಶ್ಯರಂತೆ ಕಾಣುತ್ತೀರಿ ಎನ್ನುವ ಪ್ರಶ್ನೆಯನ್ನು ಕೂಡ ಈಗ ಕೇಳಲಾಗುತ್ತಿದೆ. ಜೋಶಿ ಕಂಡ ಜನತಾದಳದನವಗ್ರಹ’ಗಳ ಮಾತು ಹೊಸದೇನಲ್ಲ. ಇದು ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಜೋಶಿಯೊಬ್ಬರೇ ಹೇಳಿದ್ದಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ಕೋಟೆಗೆ ಕನ್ನ ಕೊರೆಯಲು ಜೋಶಿಯನ್ನು ಬಳಸಿಕೊಂಡಿದ್ದಾರೆ. ಇದು ಸ್ಪಷ್ಟ.
ಕರ್ನಾಟಕದ ರಾಜಕಾರಣದಲ್ಲಿ, ಕರ್ನಾಟಕದ ಜನಸಂಖ್ಯೆಯಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರು. ಹಿಂದಿನ ಸಿದ್ದರಾಮಯ್ಯ ಸರ್ಕಾರ ನಡೆಸಿದ, ಈವರೆಗೂ ಬಹಿರಂಗವಾಗದಿದ್ದರೂ ಪ್ರಸಿದ್ಧಿಯಾಗಿರುವ, ಆಪ್ತ ವಲಯದಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ೧೩ ಲಕ್ಷ ಬ್ರಾಹ್ಮಣ ಮತದಾರರಿದ್ದಾರೆ. ಅದೂ ಕೂಡ ರಾಜ್ಯಾದ್ಯಂತ ಚದುರಿದ್ದು. ಅಷ್ಟೇ ಅಲ್ಲ. ಇವರಲ್ಲಿಯೇ ನೂರೆಂಟು ಉಪಪಂಗಡಗಳು. ಹಾಗಾಗಿ ಬ್ರಾಹ್ಮಣರದೊಂದು ಮತಬ್ಯಾಂಕ್ ಇಲ್ಲ. ಏಕೆಂದರೆ ಇವರ ಮತದಿಂದ ಆಗಬೇಕಾಗಿದ್ದು ಏನೂ ಇಲ್ಲ ಎನ್ನುವುದು.
ಆದರೆ ಕಡೆಗಣಿಸುವುದರಿಂದಾಗುವ ಅಷ್ಟೇ ಅಪಾಯವನ್ನೂ ಎಲ್ಲ ಪಕ್ಷಗಳು ಮನಗಂಡಿವೆ. ಅತಿ ಬುದ್ಧಿವಂತ, ಪ್ರಭಾವಿ ಸಮುದಾಯ ಮತ್ತು ಸೌಹಾರ್ದತೆ, ಸಹಮತದ ಅಭಿಪ್ರಾಯದ ನೆಲೆಯಲ್ಲಿ ಈ ಸಮುದಾಯ ಇತರ ಸಮುದಾಯಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿರುವುದರಿಂದ ಎಲ್ಲ ಕ್ಷೇತ್ರದಲ್ಲಿ ಅವರು ಅಪ್ರಸ್ತುತರು ಎನ್ನಿಸುವುದೇ ಇಲ್ಲ.
ಆದರೆ ಪ್ರಜಾಪ್ರಭುತ್ವದ ವಿಶೇಷತೆ ಇರುವುದೇ ಬಲಾಢ್ಯ ಸಮುದಾಯಗಳಾಗಿದ್ದರೂ ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಧರ್ಮಸಿಂಗ್, ವೀರಪ್ಪ ಮೊಯಿಲಿ ಇವರುಗಳು ಮುಖ್ಯಮಂತ್ರಿಯಾದ ಸಂಗತಿಯಲ್ಲಿ!. ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗುತ್ತಿರುವ ಹಾಗೂ ಕೈಗಾರಿಕಾ ಮಂತ್ರಿಯಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿರುವ ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರದಲ್ಲಿ ಅವರ ಸಮುದಾಯದ (ಜಿಎಸ್‌ಬಿ) ಮತ ಇರುವುದು ನಾಲ್ಕೈದು ನೂರು ಇಲ್ಲ. ಹಾಗೆಯೇ ರಮೇಶಕುಮಾರ, ಸುರೇಶಕುಮಾರ, ಪ್ರಲ್ಹಾದ ಜೋಶಿ ಮೊದಲಾದವರ ಕ್ಷೇತ್ರಗಳೂ ಕೂಡ.
ಜಾತಿ ಮೀರಿ ಬೆಳೆದರು ಎನ್ನುವುದಕ್ಕಿಂತ ಇವರೆಲ್ಲ ಇತರೇ ಜಾತಿಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸಿ ಸೌಹಾರ್ದತೆಯಿಂದ ರಾಜಕಾರಣ ನಡೆಸಿದವರು ಎಂದರೆ ತಪ್ಪಲ್ಲ. ಹಾಗಂತ ಬ್ರಾಹ್ಮಣ ಮುಖ್ಯಮಂತ್ರಿ ಎನ್ನುವ ಚಿಪ್ಪಿನೊಳಗಿನಿಂದ ಹೊರತಂದ ಕುಮಾರಸ್ವಾಮಿ ಆ ಸಮುದಾಯವನ್ನು ಪ್ರೀತಿಸಿದವರೇ. ಮಠ- ಮಾನ್ಯಗಳನ್ನು, ದೇವರು- ಪೂಜ್ಯರನ್ನು ಆರಾಧಿಸಿದವರೇ. ವಿಚಿತ್ರ ಎಂದರೆ ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಸಪತ್ನಿಕರಾಗಿ ಹೋಗಿ ರಾಯರ ಆಶೀರ್ವಾದ, ಮಂತ್ರಾಕ್ಷತೆ, ಸ್ವಾಮಿಗಳ ಸಂದರ್ಶನ ಎಲ್ಲವನ್ನೂ ಪೂರೈಸಿಕೊಂಡು ಬಂದ ಎರಡು ದಿನಗಳ ನಂತರವೇ ಬ್ರಾಹ್ಮಣ' ರಾಜಕಾರಣ ಅಸ್ತ್ರವನ್ನು ಪ್ರಯೋಗಿಸಿದ್ದು ಕುಮಾರಸ್ವಾಮಿ ತಂತ್ರಗಾರಿಕೆ ಜಾಣ್ಮೆಯನ್ನು ತೋರಿಸುತ್ತದೆ. ಹೀಗೆಯೇ ಇದೇ ನವಗ್ರಹ ಮಾತನ್ನು ಸಿದ್ದರಾಮಯ್ಯ, ಜಮೀರ, ಅಶ್ವತ್‌ನಾರಾಯಣ, ಮುನಿರತ್ನ ಹತ್ತಾರು ಸಾರೆ ಹೇಳಿದ್ದಾರೆ. ಆದರೆ, ಜೋಷಿ ಯಾವಾಗ ಹೇಳಿದರೋ ಬತ್ತಳಿಕೆಯಿಂದ ಬಾಣ ತೆಗೆಯಲು ಚಾಣಾಕ್ಷರಾದರು. ಅವರಿಗೊಂದು ಧೈರ್ಯ ಏನೆಂದರೆ ಬ್ರಾಹ್ಮಣರಿಂದ ತಮಗೆ, ತಮ್ಮ ಪಕ್ಷಕ್ಕೆ ಹಾನಿ ಆಗುವಂತದ್ದೇನಿಲ್ಲವಲ್ಲ! ಹಾಗೇ, ಬ್ರಾಹ್ಮಣರು ನಾಲ್ಕುದಿನ ಮಾತಾಡಿ ಸಾರುಂಡು ತೆಪ್ಪಗಿರುವವರು! ಬ್ರಾಹ್ಮಣ ಮಠಾಧೀಶರುಗಳು ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅದರ ಹಿಂದೆ ಹಿಂದೆ ತಳಮಳ ಇದ್ದಂತಿದೆ. ಬಹುಶಃ ಜೋಶಿಯವರಿಗೂ ಮತ್ತು ಬಿಜೆಪಿಗೂನವಗ್ರಹ ಮಾತು’ ಇಷ್ಟು ಬೇಗ ಈ ರೀತಿ ಹಿಂಬರ್ತಿ ಹೊಡೆಯುತ್ತದೆ ಎನ್ನುವ ಕಲ್ಪನೆ ಇದ್ದಂತಿಲ್ಲ. ಏನೇ ಇದ್ದರೂ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖರು ರಾಜ್ಯ ರಾಜಕಾರಣದಲ್ಲಿ ಇಟ್ಟಿರುವ ಹೆಜ್ಜೆ, ವಿಶೇಷವಾಗಿ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್, ವಿಜಯೇಂದ್ರ, ಪಂಚಮಸಾಲಿ ಸಮುದಾಯ ಮೀಸಲಾತಿ ಹಾಗೂ ಈವರೆಗೆ ನಡೆದಿರುವ ಕೆಲವು ನಾಮಕರಣಗಳು, ಹೈಕಮಾಂಡ್ ವರ್ತನೆ ಎಲ್ಲವುಗಳ ಕುರಿತೂ ಪುನರ್ವಿಮರ್ಶಿಸಬೇಕಾದ ಅಗತ್ಯವನ್ನಂತೂ ತೋರಿಸಿಕೊಟ್ಟಿದೆ. ಹಾಗಂತ ಇಲ್ಲಿಯವರೆಗೆ ಯಾರೂ `ಪ್ರಲ್ಹಾದ ಜೋಶಿ ಅಥವಾ ಬ್ರಾಹ್ಮಣರು ಮುಖ್ಯಮಂತ್ರಿ ಮಾಡುವುದಿಲ್ಲ’ ಎಂಬ ಹೇಳಿಕೆ ನೀಡಿಲ್ಲ. ಕುಮಾರಸ್ವಾಮಿ ನಿಖರ ಮಾತು ಮತ್ತು ಮೂಲದ ಬಗ್ಗೆ ಬಹುಶಃ ಅನುಮಾನಿಸಬೇಕಿಲ್ಲವೇನೋ.
ಮತ್ತೊಂದು ಮಗ್ಗಲಿದೆ. ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಮೇಲೆ ಪ್ರಬಲ ಕಳಂಕವಿದೆ. ರಾಮಕೃಷ್ಣ ಹೆಗಡೆಯವರನ್ನು ಹೇಗೇಗೋ ಪೀಡಿಸಿದರು. ಅವರು ಅಧಿಕಾರದಲ್ಲಿದ್ದಾಗ ಕಡು ಕಾಡಿದರು.. ಬೊಮ್ಮಾಯಿಯವರ ಸರ್ಕಾರವನ್ನು ಕೆಡವಿದರು. ಕೊನೆಗೆ ೧೯೯೪ ರಲ್ಲಿ ಹೆಗಡೆಯವರಿಗೆ ಚಪ್ಪಲಿ ಏಟು, ಬಟ್ಟೆ ಹರಿದು ಹಾಕಿಸಲಾಗಿತ್ತೆಂಬ ಆರೋಪವಿತ್ತು ಅಲ್ಲದೇ, ಪ್ರಧಾನ ಮಂತ್ರಿಯಾದ ತಿಂಗಳ ಒಳಗೆ ಹೆಗಡೆಯವರೇ ರಾಜ್ಯದಲ್ಲಿ ಕಟ್ಟಿದ ಪಕ್ಷದಿಂದ ಅವರನ್ನು ಉಚ್ಚಾಟಿಸಿದರು ಎನ್ನುವ ಕಳಂಕ ಬೇರೆ.
ಇದೇ ಕಾರಣಕ್ಕೇ ಈವರೆಗೂ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯ ಜನತಾದಳ (ಎಸ್)ಅನ್ನು ಮತ್ತು ದೇವೇಗೌಡರ ಕುಟುಂಬವನ್ನು ಒಪ್ಪುತ್ತಿಲ್ಲ ಎನ್ನುವ ಆರೋಪ. ಏನಕೇನ ಸವಾಲುಗಳನ್ನು ತಂತ್ರಗಾರಿಕೆಯನ್ನು ಹೆಣೆದರೂ ಈವರೆಗೂ ಈ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಮತ್ತು ೨೫ ಕೋಟಿ ರೂ. ಅನುದಾನ ಇತ್ಯಾದಿ ಘೋಷಿಸಿದರೂ ಕೂಡ ದೇವೇಗೌಡರ ಮೇಲಿನ ಸಿಟ್ಟು ಶಮನವಾಗಿಲ್ಲ. ರಾಮಕೃಷ್ಣ ಹೆಗಡೆಯವರ ಅಣ್ಣನ ಮಗನನ್ನು ಜೆಡಿಎಸ್‌ಗೆ ತಂದು ಟಿಕೆಟ್ ನೀಡಿದರೂ ಜನ ಬೆಂಬಲಿಸಲಿಲ್ಲ.
ಈ ಕಳಂಕ ನಿವಾರಣೆಗೆ ಒಳ್ಳೆಯ ಅವಕಾಶ ಇತ್ತು ಕುಮಾರಸ್ವಾಮಿಯವರಿಗೆ. ಬ್ರಾಹ್ಮಣ ಸಮುದಾಯವನ್ನು ಹಳಿದು ಇದನ್ನು ಕೈಯಾರೆ ಕಳೆದುಕೊಂಡರೆ ಎನ್ನುವುದು ಕೂಡ ಈಗ ಚರ್ಚಿತ ವಿಷಯ. ೨೦೨೩ರ ವಿಧಾನಸಭೆ ಚುನಾವಣೆ ಹಾಗೂ ೨೪ರ ಲೋಕಸಭೆ ಚುನಾವಣೆ ಇಂತಹ ತಂತ್ರ-ಪ್ರತಿತಂತ್ರ, ಆಕರ್ಷಣೆ-ಘರ್ಷಣೆ, ಒಳ-ಹೊರ ರಾಜಕೀಯ ಸುಳಿಗಾಳಿಯನ್ನು ಕಾಣಬೇಕೇನೋ..

Previous articleಸುರತ್ಕಲ್ ವ್ಯಾಪ್ತಿಯಲ್ಲಿ ಲಘು ಅಪಘಾತ: ಮಾತಿನ ಚಕಮಕಿ
Next articleಯುಕೆಜಿ ವಿದ್ಯಾರ್ಥಿ ಫೇಲ್: ಆಕ್ರೋಶ