ಬೆಳಗಾವಿಗೆ ಶೀಘ್ರದಲ್ಲಿ ಮಿನಿ ತಾರಾಲಯ

ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಯಲ್ಲೇ, ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿಂದು ವಿಜ್ಞಾನ ಕೇಂದ್ರ ಮತ್ತು ತಾರಾಲಯ ಕಟ್ಟಡಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಬೋಸರಾಜ್ ಮಾತನಾಡಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಹಾಗೂ ಮಿನಿ ತಾರಾಲಯಗಳಳನ್ನು ಸ್ಥಾಪಿಸಲಾಗಿದೆ. ಇನ್ನುಳಿದ ಮೂರು ಜಿಲ್ಲೆಗಳಲ್ಲಿ ಇವುಗಳ ಸ್ಥಾಪನೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಯಲ್ಲೇ, ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ, ಬೆಂಗಳೂರಿನ ಹೆಬ್ಬಾಳದಲ್ಲಿ ಏಷಿಯಾ ಖಂಡದಲ್ಲಿ ನಂಬರ್ ಒನ್ ಮಾದರಿಯಲ್ಲಿ ಸೈನ್ಸ್ ಗ್ಯಾಲರಿ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಪ್ರತಿ‌ ಜಿಲ್ಲೆಗಳಲ್ಲಿ ತಾರಾಲಯ‌ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಮಂಗಳೂರು ಜಿಲ್ಲೆಯ ಪಿಲಿಕುಳಿಯಲ್ಲಿ 350 ಎಕರೆ ಪ್ರದೇಶದಲ್ಲಿ ದೊಡ್ಡ ತಾರಾಲಯವನ್ನು ಸ್ಥಾಪಿಸಲಾಗಿದೆ. ಸರಕಾರದ ವತಿಯಿಂದ ರಾಜ್ಯದ 833 ವಸತಿ ಶಾಲೆಗಳಿಗೆ ಟೆಲಿಸ್ಕೋಪ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಲ್ಯಾಬರೋಟರಿಗಳನ್ನು‌ ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ನೀಡಲಾಗುವುದು ಎಂದರು.