ಬೆಳಗಾವಿಗೆ ಇಂದು ನಡ್ಡಾ, ಟಿಕೆಟ್ ಕುತೂಹಲ

0
8

ಬೆಳಗಾವಿ: ಲೋಕ ಸಮರದ ದಿನಾಂಕ ಘೋಷಣೆಗೆ ಕಾಲ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಎದೆ ಬಡಿತ ಜೋರಾಗುತ್ತಿದೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಾಳೆ ದಿ. ೫ರಂದು ಬೆಳಗಾವಿ, ಚಿಕ್ಕೋಡಿಗೆ ಭೆಟ್ಟಿ ನೀಡಲಿದ್ದು ಬಿಜೆಪಿಯಲ್ಲಿ ಸಂಚಲನ ಮೂಡಿದೆ.
ಸೋಮವಾರವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರಬೇಕಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರ ಕಾರ್ಯಕ್ರಮ ರದ್ದಾಗಿ ಮಂಗಳವಾರ ನಿಗದಿಯಾಗಿದೆ.
ಈ ಸಂದರ್ಭದಲ್ಲಿ ಟಿಕೆಟ್ ಲೆಕ್ಕಾಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷದ ಪ್ರಮುಖರು ಅಷ್ಟೇ ಅಲ್ಲ ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆಂದು ಗೊತ್ತಾಗಿದೆ.
ಎರಡೂ ಪಕ್ಷದಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದ ಮೇಲೆ ಬಹುತೇಕರ ಕಣ್ಣು ನೆಟ್ಟಿದೆ. ಹೀಗಾಗಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವುದು ಸ್ಪಷ್ಟವಾಗುವ ಸಾಧ್ಯತೆಗಳಿವೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಹೆಬ್ಬಾಳಕರ ತಪ್ಪಿದರೆ ಡಾ. ಗಿರೀಶ ಸೋನವಾಲ್ಕರ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತಿದೆ. ಈ ಇಬ್ಬರನ್ನು ಹೊರತುಪಡಿಸಿದರೆ ಬೇರೆಯವರ ಹೆಸರು ಕೇಳಿ ಬರುತ್ತಿಲ್ಲ.
ಬೆಳಗಾವಿ ಲೋಕಸಮರದಲ್ಲಿ ಬಿಜೆಪಿಯಿಂದ ಹೊಸ ಮುಖಕ್ಕೆ ಅವಕಾಶ ಕೊಡುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹೀಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಕಳೆದ ದಿನವಷ್ಟೇ ಬಿಜೆಪಿ ಜಿಲ್ಲಾಧ್ಯಕ್ಷರ ಬಳಿ ಸಂಸದೆ ಮಂಗಲಾ ಅಂಗಡಿ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮತ್ತು ನ್ಯಾಯವಾದಿ ವಿದ್ಯಾ ಪಾಟೀಲರು ಅರ್ಜಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ಹಿರೇಮಠರೂ ಕೂಡ ಟಿಕೆಟ್‌ಗೆ ತೆರೆಮರೆಯ ಕಸರತ್ತು ನಡೆಸಿದ್ದಾರೆ.
ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿಯಲ್ಲಿ ಮಾತ್ರ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಪ್ಪಿದರೆ ಡಾ.ಪ್ರಭಾಕರ ಕೋರೆ ಅವರ ಪುತ್ರ ಅಮಿತ್ ಕೋರೆ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ಮಾತಿದೆ.

Previous articleಸ್ಫೋಟದ ಭೀತಿ ರಾಜಕಾರಣದ ನೀತಿ
Next articleಬಕೆಟ್ ಹಿಡಿದರೆ ಟಿಕೆಟ್