ಧಾರವಾಡ: ಬಿಜೆಪಿಯವರು ಮಾಡುತ್ತಿರುವ ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧವಲ್ಲ. ಬದಲಿಗೆ ಮೋದಿ ವಿರುದ್ಧ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ದೇಶದಲ್ಲಿ ಬೆಲೆ ಏರಿಕೆಗೆ ಪ್ರಧಾನಿ ಮೋದಿ ಅವರೇ ಕಾರಣ. ಆದರೆ, ಬಿಜೆಪಿಯವರಿಗೆ ಹೆಸರು ಹೇಳಲು ಬರುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಹೆಸರು ಹೇಳಿ ರಾಜ್ಯದಲ್ಲಿ ಬೆಲೆ ಏರಿಕೆ ಆಗಿದೆ ಎಂದು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎನ್ನುವುದನ್ನು ಶೇಕಡಾವಾರು ತೆಗೆದು ಮಾತನಾಡಲಿ. ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಹೀಗೆ ಮಾತನಾಡಿದರೆ ಆಗದು ಎಂದರು.
ಗುಜರಾತಿನ ಜಾಮನಗರದಲ್ಲಿ ವಿಮಾನ ಪತನ ಆಗಿದೆ. ಸಿದ್ದಾರ್ಥ ಎಂಬ ಯುವಕ ಮೃತಪಟ್ಟಿದ್ದಾನೆ. ಅದು ೭೦ ವರ್ಷ ಹಿಂದಿನ ವಿಮಾನ. ಹೀಗಾಗಿ ಅದು ಪತನವಾಗಿದೆ. ಇದರ ಬಗ್ಗೆ ಎಲ್ಲಿಯೂ ಚರ್ಚೆ ಇಲ್ಲ. ಈ ವಿಚಾರ ಮುಚ್ಚಿ ಹಾಕಲು ವಕ್ಫ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದರು.