ಬಾಲ್ಯ ವಿವಾಹ: ೫ ಮಂದಿಗೆ ಶಿಕ್ಷೆ

0
19

ಮಂಗಳೂರು: ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಪರಾಧ ಎಸಗಿದವರಿಗೆ ಮಂಗಳೂರಿನ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾದ ಉಳ್ಳಾಲ ಮಂಜನಾಡಿ ಮೊಂಟೆಪದವಿನ ಇಮ್ತಿಯಾಝ್ (೨೯), ಬಾಲಕಿಯ ತಂದೆ ಅಬ್ದುಲ್ ಖಾದರ್, ತಾಯಿ ರಮ್ಲತ್, ಮಾವ ಕೆ.ಐ.ಮುಹಮ್ಮದ್ ಹಾಗೂ ಅತ್ತೆ ಮೈಮುನಾ ಶಿಕ್ಷೆಗೊಳಗಾದವರು.
ಬಾಲಕಿಗೆ ೧೭ ವರ್ಷ ವಯಸ್ಸಾದಾಗ ಅಂದರೆ ೨೦೨೩ರ ಮೇಯಲ್ಲಿ ಮದುವೆ ಮಾಡಲಾಗಿತ್ತು. ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ತನಿಖೆ ಪೂರ್ಣಗೊಳಿಸಿ ಪೊಕ್ಸೊ ಕಾಯ್ದೆಯ ಕಲಂ ೬ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಕಲಂ ೯, ೧೦ ಮತ್ತು ೧೧ರಂತೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-೨ ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅಭಿಯೋಜನೆ ಪರ ಒಟ್ಟು ೧೦ ಸಾಕ್ಷಿದಾರರನ್ನು ವಿಚಾರಿಸಿ ೨೨ ದಾಖಲೆಗಳನ್ನು ಗುರುತಿಸಲಾಗಿತ್ತು. ಈ ಪ್ರಕರಣದ ಸಾಕ್ಷ್ಯ ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಮತ್ತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಮಾನು ಕೆ.ಎಸ್. ಮೂವರು ಆರೋಪಿಗಳ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ ೧೦ ಮತ್ತು ೧೧ರಡಿ ೧ ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ತಲಾ ೫,೦೦೦ ರೂ. ದಂಡ, ಆರೋಪಿ ಇಮ್ತಿಯಾಝ್ ಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ ೯ರಡಿ ೧ ವರ್ಷಗಳ ಕಠಿಣ ಶಿಕ್ಷೆ ಮತ್ತು ೫,೦೦೦ ರೂ. ದಂಡ ವಿಧಿಸಿದೆ. ಸರಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.

Previous articleಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
Next articleಹೋಮ್ ನರ್ಸ್‌ನಿಂದ ಲಕ್ಷಾಂತರ ವಂಚನೆ : ಮುಂಬೈಯಲ್ಲಿ ಆರೋಪಿಗಳ ಬಂಧನ