ಬಾಗಿಲು ಒದ್ದು ಅಧಿಕಾರ ಪಡೆಯುವುದು ಹೇಗೆ?

0
12

ನಾನು ಬಾಗಿಲಿಗೆ ಒದ್ದು ಗಂಟಲು ಹರಿಯುವ ಹಾಗೆ ಒದರದಿದ್ದರೆ… ಕಣ್ಣು ಕೆಂಪಗೆ ಮಾಡಿಕೊಳ್ಳದಿದ್ದರೆ… ನಾನು ಇವತ್ತು ಈ ಪೊಜಿಷನ್ನಿನಲ್ಲಿ ಇರುತ್ತಿದ್ದೆನಾ? ಮೀಸೆ ಮೇಲೆ ಕೈ ಹಾಕಿ ಹ ಹ ಹ ಅನ್ನುತ್ತಿದ್ದೆನಾ? ಇಲ್ಲಿಲ್ಲ ಎಂದು ಆ ಬಂಡೇಸಿ ಅಬ್ಬರಿಸಿದ್ದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಬಿಜಿನೆಸ್ ಮೈಂಡ್ ಬರಕೇಸಿ… ಇದನ್ನೇ ಬಂಡವಾಳ ಮಾಡಿಕೊಳ್ಳಬೇಕೆಂದು ಯೋಚನೆ ಮಾಡಿ ಮರುದಿನವೇ ಮನೆಮುಂದೆ ಒದ್ದು ಅಧಿಕಾರ ಪಡೆಯುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು. ಇಲ್ಲಿ ತರಬೇತಿ ಪಡೆದರೆ ಅಧಿಕಾರ ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಗ್ಯಾರಂಟಿ ಕೊಡಲಾಗುವುದು. ಒಂದಿಲ್ಲೊಂದು ಕಾರಣದಿಂದ ಅಧಿಕಾರದಿಂದ ವಂಚಿತರಾದವರು ಕೂಡಲೇ ಬಂದು ತರಬೇತಿಗೆ ಸೇರಿಕೊಳ್ಳಿ ಎಂದು ಬೋರ್ಡ್ ಬರೆಯಿಸಿ ಹಾಕಿದ್ದ… ಮರು ದಿನದಿಂದಲೇ ಅಧಿಕಾರ ವಂಚಿತ ಖಾದಿಮಂದಿ ಸಿಕ್ಕಾಪಟ್ಟೆ ಫೀಸು ಕಟ್ಟಿ ತರಬೇತಿಗೆ ಹಾಜರಾದರು. ಬಾಗಿಲನ್ನು ಹೇಗೆ ಒದೆಯಬೇಕು… ಒಂದೇ ಸಲ ಒದ್ದರೆ ಸಾಕಾ ಎರಡೆರಡು ಬಾರಿ ಒದೆಯಬೇಕಾ? ಒದ್ದಾಗ ಬಾಗಿಲು ಮುರಿದರೆ ಹೇಗೆ… ಬಾಗಿಲು ಒದೆಯುವಾಗ ಹೇಗೆ ಕಿರುಚಬೇಕು… ಹಾಂ… ಹೂಂ… ಎಂದು ಅನ್ನಬೇಕಾ ಹೇಗೆ…? ಪಾನಕ ಕುಡಿದು ಒದೆಯಬೇಕಾ? ಮಜ್ಜಿಗೆ ಕುಡಿದು ಒದೆಯಬೇಕಾ? ಎನ್ನುವುದರ ಬಗ್ಗೆ ತರಬೇತಿ ನೀಡಲಾಯಿತು. ಬ್ಯಾಚುಗಟ್ಟಲೇ ಮಂದಿ ತರಬೇತಿ ಪಡೆದು ಹೊರಬಿದ್ದರು. ಬರಕೇಸಿಗೆ ನಿರೀಕ್ಷೆಗೂ ಮೀರಿ ಹಣ ಬಂತು. ಅಧಿಕಾರದಲ್ಲಿದ್ದವರಿಗೆ ಈ ಸುದ್ದಿ ಗೊತ್ತಾಯಿತು. ಅವರು ಕಬ್ಬಿಣದ ಬಾಗಿಲನ್ನು ಮಾಡಿಸಿ ಅದರ ಮೇಲೆ ಕಟ್ಡಿಗೆ ಬಡಿಸಿದರು. ನೋಡಲು ಕಟ್ಟಿಗೆ ಬಾಗಿಲು ಕಂಡಹಾಗೆ ಕಾಣುತ್ತಿತ್ತು. ಅಧಿಕಾರ ವಂಚಿತ ತರಬೇತಿ ಒಡೆದವರು ಪಾನಕ ಕುಡಿದು ರಾತ್ರಿ ಸಾಹೇಬರ ಮನೆ ಬಾಗಿಲಿಗೆ ಒದ್ದರು… ಊಹೂಂ ಕಿಮಕ್ ಅನ್ನಲಿಲ್ಲ ಐದಾರು ಬಾರಿ ಒದ್ದು… ಒದ್ದು… ಕಾಲುಗಳು ಬಾವು ಬಂದವು… ಹಲವರ ಕಾಲು ಫ್ಯಾಕ್ಚರ್ ಆದವು…. ಬಹುತೇಕರು ಅಡ್ಮಿಟ್ ಆದರು… ಎಲ್ಲರೂ ಅರಾಮಾಗಿ ಬಂದು ತರಬೇತಿ ಶಾಲೆ ಮುಖ್ಯಸ್ಥ ಬಿಜಿನೆಸ್ ಮೈಂಡ್ ಬರಕೇಸಿ ಮನೆಗೆ ಹೋಗಿ ಬಾಗಿಲು ಒದ್ದರು… ಒಂದೇ ಹೊಡೆತಕ್ಕೆ ಬಾಗಿಲು ಮುರಿದುಬಿತ್ತು. ಒಳಗೆ ಮಲಗಿದ್ದ ಬರಕೇಸಿಯನ್ನು ದರ ದರ ಎಳೆದುಕೊಂಡು ಅಂಗಳಕ್ಕೆ ಕೆಡವಿ ಒದ್ದು ತರಬೇತಿಗೆ ಕೊಟ್ಟ ಹಣ ವಸೂಲಿ ಮಾಡಿದರು…

Previous articleಶುದ್ಧ ಆರ್ಥಿಕ ಚಿಂತಕ ಕಾಯಕವೇ ಕೈಲಾಸಕ್ಕೆ ಪ್ರತೀಕ
Next articleಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ?