ಪ್ರತಿಮಾ ಕೊಲೆ ಪ್ರಕರಣ: ಎಲ್ಲ ಆಯಾಮಗಳಲ್ಲೂ ತನಿಖೆ

0
14

ದಾವಣಗೆರೆ:ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದ ಬಗ್ಗೆ ಹತ್ತಾರು ಸಂಶಯಗಳಿದ್ದು, ಈ ಎಲ್ಲಾ ಆಯಾಮಗಳಲ್ಲೂ ಪೊಲೀಸ್ ತನಿಖೆ ನಡೆಯಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು, ಕೆಲವರು ಇಲಾಖೆಯ ವಿಚಾರವೆಂದು, ಮತ್ತೆ ಕೆಲವರು ಕಾರು ಚಾಲಕನಿಗೆ ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆಂದು ಹೇಳುತ್ತಿದ್ದಾರೆ. ಕೊಲೆಗೆ ನಿರ್ಧಿಷ್ಟ ಕಾರಣ ಏನೆಂಬುದು  ಗೊತ್ತಾಗುತ್ತಿಲ್ಲ ಎಂದರು.
ಕೊಲೆಗೆ ನಾನಾ ಕಾರಣ ಕೇಳಿ ಬರುತ್ತಿದೆ. ಮೃತ ಪ್ರತಿಮಾ ಜೊತೆಗೆ ಯಾರು ಯಾರು ಸಂಪರ್ಕದಲ್ಲಿದ್ದರೆಂಬ ಬಗ್ಗೆ ತನಿಖೆ ನಡೆದಿದೆ. ಪ್ರತಿಮಾ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಿದೆ. ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂಬ ಮಾತುಗಳು ಕೇಳಿ ಬರುತ್ತಿದೆ. ಪೊಲೀಸ್ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ಇಲಾಖೆ ಅಧಿಕಾರಿಗಳೊಂದಿಗೆ ನಿನ್ನೆಯಷ್ಟೇ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಕೊಲೆಯಾದ ಪ್ರತಿಮಾ ಸಹ ಭಾಗಿಯಾಗಿದ್ದರು. ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದರು. ತೀರ್ಥಹಳ್ಳಿಯವರಾದ ಪ್ರತಿಮಾಗೆ ಮಕ್ಕಳಿದ್ದಾರೆ. ಪ್ರತಿಮಾ ಕೊಲೆ ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಯಲಿದ್ದು, ಕೊಲೆಗೆ ಕಾರಣ ಏನೆಂಬುದೂ ಬಯಲಾಗಲಿದೆ ಎಂದು ಅವರು ಹೇಳಿದರು.
ಎಲ್ಲರಿಗೂ ಪೊಲೀಸ್ ಭದ್ರತೆಯನ್ನು ಕೊಡಲು ಆಗುವುದಿಲ್ಲ. ಪ್ರತಿಮಾ ಕೊಲೆ ಪ್ರಕರಣವೇ ಬೇರೆ. ಆಂತರಿಕವಾಗಿ ಏನಿದೆಯೋ, ಏನಾಗಿದೆಯೋ ಗೊತ್ತಿಲ್ಲ. ನೋಡೋಣ ತಾಳಿ. ಪೊಲೀಸ್ ತನಿಖೆಯಾಗಲಿ ಎಂದು ರಾಜ್ಯದಲ್ಲಿ ಅಧಿಕಾರಿಗಳಿಗೆ ಭದ್ರತೆ ಇಲ್ಲವೆಂಬ ಕುರಿತ ಮಾಧ್ಯಮದವರ ಪ್ರಶ್ನೆಗೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು.

Previous articleಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ
Next articleಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗಿಲ್ಲ ಕಿಮ್ಮತ್ತು