ಪ್ರಣಾಳಿಕೆಗೆ ಮುಂಗಡಪತ್ರದ ಬಣ್ಣ

0
22

ತಮ್ಮ ಕನಸುಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳು ಬರುತ್ತಿದ್ದಾರೆ. ಅವರಿಗೆ ಕಂಡಿರುವುದು ಗದ್ದುಗೆಯ ಕನಸು. ಈ ಕನಸಿನ ಸಾಕಾರಕ್ಕಾಗಿ ಜನರ ಮುಂದೆ ಕನಸುಗಳನ್ನು ಮಾರಾಟ ಮಾಡುತ್ತಾರೆ. ಅವರೇ ಈಗ ಮತಭಿಕ್ಷೆ ಕೋರುತ್ತಿರುವ ರಾಜಕೀಯ ಪಕ್ಷಗಳು, ಅವುಗಳ ಉಮೇದುವಾರರು. ತಮ್ಮದೊಂದು ಮತ ಕೊಡಿ. ನಿಮ್ಮ ಸದೀಚ್ಛೆ ನನ್ನ ಕಾಳಜಿ ಎಂದು ತಮ್ಮಲ್ಲಿರುವ ಎಲ್ಲ ಕೊಡುಕೊಳ್ಳುವ ವ್ಯವಹಾರದಲ್ಲಿ, ಆಸೆ ಆಮಿಷಗಳ ತುಪ್ಪ ಸವರಿ ಈಗ ಮಾರಾಟ ಮಾಡುತ್ತಿದ್ದಾರೆ.
ಈಗ ಚುನಾವಣೆಯ ಕಾಲ. ಕಳೆದ ಐದು ದಿನಗಳಿಂದ ಈಚೆಗೆ ಈ ಮಾರಾಟಗಾರರು ಜನರ ಮೋಡಿಗಾಗಿ ಲಗ್ಗೆ ಇಟ್ಟಿದ್ದಾರೆ. ಪೈಪೋಟಿಗೆ ಬಿದ್ದಿದ್ದಾರೆ. ಏನೆಲ್ಲ ಕೊಡುಗೆಗಳು, ಎಂತೆಲ್ಲ ಆಶ್ವಾಸನೆಗಳು…! ಕಲ್ಲು ಕುಟ್ಟಿ ನೀರು ತೆಗೆಯುವ, ಭಾವನೆಗಳಿಗೆ ಕಿಚ್ಚು ಹಚ್ಚುವ, ಸ್ವರ್ಗ ಸುಖವನ್ನೇ ಮನೆಬಾಗಿಲಿಗೆ ತಂದೊಪ್ಪಿಸುವ ಪ್ರತಿಜ್ಞೆಗಳೊಂದಿಗೆ ಪ್ರತ್ಯಕ್ಷರಾಗಿದ್ದಾರೆ.
ಸದ್ಯ ರಾಜಕೀಯ ಪಕ್ಷಗಳು ಘೋಷಣೆ ಮಾಡಿರುವ ತಮ್ಮ ಪ್ರಣಾಳಿಕೆಯನ್ನು ಬಿಚ್ಚಿಟ್ಟರೆ ಬಹುಶಃ ಗದ್ದುಗೆ ತುಮುಲದ ಪೈಪೋಟಿ ಎಷ್ಟಿದೆ ಎನ್ನುವುದನ್ನು ನೋಡಬಹುದು. ಚುನಾವಣೆ ಬಂದಾಗ ಮುಂದಿನ ಐದು ವರ್ಷದಲ್ಲಿ ತಾವೇನು ಮಾಡುತ್ತೇವೆ ಎಂದು ಜನತೆಗೆ ನೀಡುವ ಆಶ್ವಾಸನೆ ಈ ಪ್ರಣಾಳಿಕೆ. ಎಂಬತ್ತರ ದಶಕದವರೆಗೂ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ತುಸು ವಿಶ್ವಾಸ, ನಂಬಿಕೆ ಇದ್ದವು. ಆ ನಂತರ ಉಚಿತ ಕೊಡುಗೆಗಳ ಧಾಂಗುಡಿ ಪ್ರಾರಂಭವಾಯಿತು. ಆ ನಂತರ ಪ್ರಣಾಳಿಕೆಗಳ ಮೇಲಿನ ನಂಬಿಕೆಯನ್ನೇ ಜನ ಕಳೆದುಕೊಂಡರು. ಈಗಂತೂ ಪ್ರಣಾಳಿಕೆ ಅಂದರೆ ಬಜೆಟ್ ಪ್ರತಿಯಂತೆ.. ಕೋಟಿ ಕೋಟಿ ಹಣ ಮೀಸಲಿನೊಂದಿಗೆ ಘೋಷಣೆಯೂ ನಡೆಸಿದ್ದು ವಿಶೇಷ! ಭಾರತದ ಪ್ರಜಾಪ್ರಭುತ್ವದಲ್ಲಿ ಮತ ಓಲೈಕೆ ರಾಜಕಾರಣಕ್ಕೆ ಮಹತ್ವದ ಸ್ಥಾನ. ಜನರ ಭಾವನಾತ್ಮಕ, ಧಾರ್ಮಿಕ ನಂಬಿಕೆಯೇ ಈ ಪ್ರಣಾಳಿಕೆಯ ಮಾನದಂಡ. ಶೇಕಡಾ ೨೫ರಷ್ಟಿರುವ ಬಡತನ, ಶೇಕಡಾ ೫೦ರಷ್ಟಿರುವ ಮಧ್ಯಮ ವರ್ಗದವರ ಬದುಕು, ಅವೇ ಈ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಬಂಡವಾಳ. ತೊಂಬತ್ತರ ದಶಕದಲ್ಲಿ ಆರಂಭವಾದ ಈ ಉಚಿತ ಕೊಡುಗೆಗಳ ಆಮಿಷ ಅಥವಾ ಭರಾಟೆ ಈಗ ಎಲ್ಲಿಗೆ ನಿಂತಿದೆ ಎಂದರೆ ಊಟದ ಮನೆಯ ದಾಟಿ ಬೆಡ್‌ರೂಂವರೆಗೂ ಬಂದಿವೆ. ನೋಡಿ. ಉಚಿತ ತೀರ್ಥಕ್ಷೇತ್ರಗಳ ಪ್ರವಾಸ, ಅವರವರ ಧರ್ಮಗಳಗೆ ಅನುಗುಣವಾಗಿ ಪ್ರವಾಸ ಪ್ಯಾಕೇಜ್‌ಗಳು, ಧರ್ಮದ ಮಂದಿರಗಳ, ಧಾರ್ಮಿಕ ಕಾರ್ಯವಿಧಾನಗಳ ಸಂಸ್ಥೆಗಳಿಗೆ ಭರಪೂರ ಕೊಡುಗೆ; ನಿತ್ಯದ ಊಟ ತಿಂಡಿಯಿಂದ ಹಿಡಿದು ಸತ್ತ ನಂತರ ಸಂಸ್ಕಾರ ನೀಡುವವರೆಗೂ ಉಚಿತದಲ್ಲೇ ಬದುಕು ಸಾಗಿಸಲು ಅನುಕೂಲವಾಗುವ ಎಲ್ಲವನ್ನೂ ಈಗ ಅಭಿವೃದ್ಧಿ ಹೆಸರಿನಲ್ಲಿ ನೀಡಲಾಗುತ್ತಿದೆ. ಮಗು ಹೊಟ್ಟೆಯಲ್ಲಿದ್ದಾಗಿನಿಂದ ಆರಂಭವಾಗಿ ಸತ್ತ ನಂತರ ಸುಡುವ ಅಥವಾ ಹೂಳುವವರೆಗೆ ಸ್ಕೀಂಗಳನ್ನು ಘೋಷಿಸಲಾಗಿದೆ. ಬಾಣಂತಿಯರಿಗೆ ಪೌಷ್ಠಿಕ ಆಹಾರ, ಆ ನಂತರ ವೈದ್ಯಕೀಯ ಸೌಲಭ್ಯ, ಶಿಕ್ಷಣ, ಬಸ್ ಪ್ರಯಾಣ, ಸ್ಟೈಪೆಂಡ್, ಉಚಿತ ಪಠ್ಯ ಪುಸ್ತಕ, ಬಿಸಿಯೂಟ, ಆ ನಂತರ ನಿರುದ್ಯೋಗ ಭತ್ಯೆ, ಶಾದಿ ಅಥವಾ ಮದುವೆ, ರಿಯಾಯ್ತಿ ದರದಲ್ಲಿ ವಾಹನ, ಅಥವಾ ಕೈಗೊಳ್ಳುವ ಉದ್ಯೋಗದಲ್ಲಿ ಸಬ್ಸಿಡಿ, ಮನೆ, ನಿವೇಶನ, ಉಚಿತ ವಿದ್ಯುತ್, ಫ್ರಿಜ್, ಕುಕ್ಕರ್, ಹೀಗೆ ಮುಂದುವರಿಯುತ್ತವೆ ಆಶ್ವಾಸನೆಗಳು. ಮೊನ್ನೆ ಮೊನ್ನೆ ರಾಜಕೀಯ ಪಕ್ಷವೊಂದು ಬಿಪಿಎಲ್ ಕಾರ್ಡ್ದಾರರಿಗೆ ನಿತ್ಯ ಅರ್ಧ ಲೀಟರ್ ಹಾಲು ಕೊಡುವ ಆಶ್ವಾಸನೆ ನೀಡಿದರೆ, ಮಾಸಿಕ ೨೦೦ ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ದವಸ ಧಾನ್ಯ, ಅಕ್ಕಿಕಾಳುಗೆಲ್ಲ ಕೊಡುಗೆಗಳ ಮಹಾಪೂರವನ್ನೇ ಇನ್ನೊಂದು ಪಕ್ಷ ಪ್ರಣಾಳಿಕೆಯಲ್ಲೀಗ ನೀಡಿದೆ. ತೀರ್ಥಕ್ಷೇತ್ರಗಳ ದರ್ಶನ, ಪ್ರಯಾಣ, ಗ್ಯಾರಂಟಿಗಳನ್ನು ಹೇರಳವಾಗಿ ನೀಡಲಾಗಿದೆ. ದೇಶದ ಚುನಾವಣಾ ಆಯೋಗ, ಸರ್ವೋಚ್ಚ ನ್ಯಾಯಾಲಯ ಕೂಡ ಈ ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ತೀವ್ರ ಆಕ್ಷೇಪವನ್ನೇ ವ್ಯಕ್ತಪಡಿಸಿದೆ. ಇವನ್ನು ಕೈಬಿಡಿ ಎಂಬ ಸ್ಪಷ್ಟ ನಿರ್ದೇಶನವನ್ನೂ ನೀಡಿದೆ. ಈ ರೀತಿಯ ಕೊಡುಗೆಗಳೇ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಮಗನುಕೂಲವಾಗುವ ವೇಳೆ, ತಮಗೆ ಅನುಕೂಲವಾಗುವ ರಾಜ್ಯಗಳಲ್ಲಿ ಘೋಷಿಸುವ, ಆಕ್ಷೇಪಿಸುವ ರಾಜಕೀಯ ಪಕ್ಷಗಳು ಈ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಪಶ್ಚಿಮ ಬಂಗಾಳ, ಬಿಹಾರ, ರಾಜಸ್ತಾನ, ಜಾರ್ಖಂಡ ಉಪ ಚುನಾವಣೆಗಳಲ್ಲಿ ಉಚಿತ ಕೊಡುಗೆಗಳ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿ ದೊಡ್ಡ ಹಂಗಾಮಾ ಸೃಷ್ಟಿಸಿದ್ದವರು ತಮ್ಮ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬೇರೆ ರಾಜ್ಯಗಳ ಚುನಾವಣೆ ವೇಳೆ, ಅವೇ ಮುಂದೆ ನಿಂತು ಉಚಿತ ಕೊಡುಗೆಗಳ ವಾಗ್ದಾನದ ಮಹಾಪೂರ ಹರಿಸಿದ್ದಿದೆ. ಈಗ ಕರ್ನಾಟಕವನ್ನೇ ನೋಡಿ. ಒಬ್ಬರಿಗಿಂತ ಒಬ್ಬರು ಪೈಪೋಟಿಯಂತೆ ಉಚಿತ ಗಿಫ್ಟ್ ಪ್ಯಾಕ್ ಘೋಷಿಸುತ್ತಿವೆ. ಆ ರಾಜ್ಯದಲ್ಲಿ ಇಲ್ಲೇಕೆ ಆಗದು ಎಂಬ ಸಮರ್ಥನೆ ಬೇರೆ. ದುಡ್ಡು ಎಲ್ಲಿಂದ ತರುತ್ತೀರಿ? ಎಂದರೆ ಅವರವರ ಮೂಗಿನ ನೇರಕ್ಕೆ ಸಮಜಾಯಿಷಿ. ಈಗ ೪೦ ಪರ್ಸೆಂಟ್ ಭ್ರಷ್ಟಾಚಾರವನ್ನು ೧೦ ಪರ್ಸೆಂಟ್‌ಗೆ ಇಳಿಸಿದರೆ ೩೦ ಪರ್ಸೆಂಟ್ ಹಣ ಇಂತಹ ಯೋಜನೆಗಳಿಗೆ ಸಾಕು ಎಂದು ಒಂದು ಪಕ್ಷ ಹೇಳಿದರೆ, ಮತ್ತೊಂದು ಪಕ್ಷ ಡಬಲ್ ಎಂಜಿನ್ ಸರ್ಕಾರ ಇರುವುದರಿಂದ ನಾವು ಕೇಂದ್ರದಿಂದ ಅನುದಾನ ತರುತ್ತೇವೆ ಎಂದು ಘೋಷಿಸಿಕೊಳ್ಳುತ್ತದೆ. ಮತ್ತೊಂದು ಉತ್ಪಾದನೆ ಹೆಚ್ಚಿಸಿಕೊಳ್ಳುತ್ತೇವೆ, ಸಮರ್ಥ ಬಿಗಿ ಆಡಳಿತದಿಂದ ಇದನ್ನು ನಿರ್ವಹಿಸುವ ಆಶ್ವಾಸನೆ ನೀಡುತ್ತದೆ. ಇದು ಬಿಟ್ಟು ಕ್ಷೇತ್ರವಾರು ಕೊಡುಗೆ ನೀಡುವಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳ ಪೈಪೋಟಿ. ಇಷ್ಟಕ್ಕೆ ನಿಲ್ಲದೇ, ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲೂ ಭಾವನಾತ್ಮಕವಾಗಿ ಅಥವಾ ಧಾರ್ಮಿಕವಾಗಿ ಕೆರಳಿಸುವ ಮತ್ತು ಮೋಡಿ ಮಾಡುವ ಆಶ್ವಾಸನೆಗಳು. ಏಕರೂಪ ನಾಗರಿಕ ಸಂಹಿತೆ, ಭಜರಂಗಿ ನಿಷೇಧ ಇತ್ಯಾದಿ ಪ್ರಥಮ ಬಾರಿಗೆ ಪ್ರಣಾಳಿಕೆಯಲ್ಲಿ ಸೇರಿಕೊಂಡಿವೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತು ಪ್ರಣಾಳಿಕೆಯಲ್ಲಿ ಅಗತ್ಯವಿತ್ತಾ, ಇದೆಯಾ ಎಂದು ಬಿಜೆಪಿ ಪ್ರಮುಖರನ್ನೇ ಕೇಳಿ, ಇರಲಿಲ್ಲ ಎನ್ನುತ್ತಾರೆ. ಹಾಗೆಯೇ ಭಜರಂಗದಳ ನಿಷೇಧದ ಮಾತು ಬೇಕಿತ್ತೇ? ಎಂದು ಕಾಂಗ್ರೆಸ್ ನಾಯಕರನ್ನು ಕೇಳಿ,ಎಂತಹ ದೊಡ್ಡ ಎಡವಟ್ಟು ಮಾಡಿಬಿಟ್ಟರು’ ಎಂಬ ಆಕ್ರೋಶ ವ್ಯಕ್ತಪಡಿಸುತ್ತಾರೆ. ಪ್ರಣಾಳಿಕೆ ತಯಾರಕರಿಗೆ ಜನರ ಭಾವನೆಗಳ ಅರ್ಥವೂ ತಿಳಿಯದು. ಅದನ್ನು ಅರಿಯಬೇಕೆಂಬ ಆಸಕ್ತಿಯೂ ಇಲ್ಲ. ಕಾಳಜಿ- ಕಳಕಳಿಯೂ ಇಲ್ಲದಿರುವುದರಿಂದಲೇ ಹೀಗಾಗಿರುವುದು.
ಇಂತಹ ಪ್ರಣಾಳಿಕೆಗಳನ್ನು ಸಿದ್ಧಪಡಿಸುವ ಪ್ರಕಾಂಡ ಪಂಡಿತರೇ ಇರುತ್ತಾರೆ. ಆದ್ದರಿಂದಲೇ ಈ ಎಡವಟ್ಟು. ಜನಸಾಮಾನ್ಯರ ಬದುಕು- ಬವಣೆ ಮತ್ತು ಅಪೇಕ್ಷೆಗಳು ಈ ಪ್ರಣಾಳಿಕೆಯಲ್ಲಿ ಇರುವುದಿಲ್ಲ. ಅಸಂಬದ್ಧ ಆಲಾಪಗಳಿಗೆ ಈ ಮಹಾನ್ ಪ್ರಣಾಳಿಕೆ ತಯಾರಕರೆಲ್ಲ, ಸ್ಟ್ರ್ಯಾಟೆಜಿಗಾರರಾಗಿತ್ತಾರೆ.
ಹಾಗಂತ, ಈ ಉಚಿತ ಕೊಡುಗೆಗಳ ಹಿಂದೆ ಬಹುದೊಡ್ಡ ಮಾಫಿಯಾವೇ ಇದೆ. ಈಗ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿಯಂತೆ ಐದೋ, ಏಳೋ, ಹತ್ತು ಕೆ.ಜಿ ಅಕ್ಕಿಯ ವಿಷಯವನ್ನೇ ತೆಗೆದುಕೊಳ್ಳೋಣ. ಇದರ ಸಾಗಾಟಕ್ಕೆ ಗುತ್ತಿಗೆ ಪಡೆಯಲು ಇರುವ ಮಾಫಿಯಾ ಸಹಸ್ರಾರು ಕೋಟಿಯದ್ದು. ಅಲ್ಲದೇ ಒಂದು ರೂಪಾಯಿಗೆ ಕೊಂಡು ಹತ್ತು ರೂಪಾಯಿಗೆ ಮಾರುವ ಇನ್ನೊಂದು ಸಹಸ್ರಾರು ಕೋಟಿಯ ಮಾಫಿಯಾ. ಇದೆಲ್ಲ ಕಾಳಸಂತೆಕೋರರ ಹಿತಕ್ಕಾಗಿಯೇ ಇರುವಂಥದ್ದೇ ವಿನಾ, ಸಾಮಾನ್ಯರಿಗಲ್ಲ.
ಈಗ ಬರಲಿದೆ ಪ್ರತಿ ಮನೆಗೂ ನಂದಿನಿ ಅರ್ಧ ಲೀಟರ್ ಉಚಿತದ ಕೊಡಗೆ. ಆಗ ನೋಡಿ ಎಷ್ಟೆಲ್ಲ ಗೋಲ್‌ಮಾಲ್‌ಗಳು. ಅಮೂಲ್, ನಂದಿನಿ ಪೈಪೋಟಿಗಿಂತ ಹಾಲಿನಲ್ಲಿ ಹುಳಿ ಹಿಂಡುವ ಕಾರ್ಯಕ್ಕೆ ಪ್ರಾಧಾನ್ಯತೆ ದೊರೆಯುತ್ತದೆ. ಒಂದು ಸಮುದಾಯದವರನ್ನು ಓಲೈಸಿಕೊಳ್ಳಲು ತೀರ್ಥಯಾತ್ರೆ. ಇನ್ನೊಂದನ್ನು ಒಲಿಸಿಕೊಳ್ಳಲು ಹಜ್ ಯಾತ್ರೆ. ಖಬರಸ್ತಾನ- ಸ್ಮಶಾನಕ್ಕೆ ಇರುವ ಪ್ರಾಧಾನ್ಯತೆ ಶಾಲೆಗಳ ದುರಸ್ತಿಗೆ ಇಲ್ಲ. ಶಿಕ್ಷಕರು, ಪೊಲೀಸರು, ಸರ್ಕಾರಿ ನೌಕರರ ನೇಮಕಾತಿ ಘೋಷಣೆ ಮಾಡಲಾಗಿದೆ. ಇದರ ಹಿಂದಿರುವ ವಾಸನೆ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರ ಅಷ್ಟೇ. ಯಾವ ಆರ್ಥಿಕ ಹಿತಚಿಂತನೆ, ಅಭಿವೃದ್ಧಿ ಯಾವುವೂ ಪ್ರಣಾಳಿಕೆಗಳಲ್ಲಿ ಇಲ್ಲ.
ಈ ಪ್ರಣಾಳಿಕೆಗಳಿಗೆ ಏನಾದರೂ ಶಾಸನ ಬದ್ಧ ಮನ್ನಣೆ ಇದೆಯೇ? ಅದೂ ಇಲ್ಲ. ಹಾಗಾಗಿಯೇ ಏನೂ ಬೇಕಾದರೂ ಆಶ್ವಾಸನೆಯನ್ನು ಕೊಡಬಹುದು. ಒಂದು ರಾಜಕೀಯ ಪಕ್ಷ ಒಂದು ಆಶ್ವಾಸನೆ ನೀಡಬೇಕಿದ್ದರೆ ಇದಕ್ಕೊಂದು ಕಾನೂನು ಚೌಕಟ್ಟು ಹಾಗೂ ಬದ್ಧತೆಯನ್ನು ಅಳವಡಿಸಿದರೆ ಮಾತ್ರ ನಿಯಂತ್ರಣಕ್ಕೆ ಬಂದೀತೇನೋ? ಇಲ್ಲದಿದ್ದರೆ ಮೋಡಿಯಷ್ಟೇ.
ಸ್ವಾತಂತ್ರ್ಯಾಯನಂತರ ಬಂದ ಕೇಂದ್ರ ಸರ್ಕಾರವಿರಲಿ. ರಾಜ್ಯ ಸರ್ಕಾರವಿರಲಿ. ಯಾವುವೂ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿದ್ದಿಲ್ಲ. ಇನ್ನು ಒಂದು ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ನಂತರ ಬಂದ ಸರ್ಕಾರಗಳು ರದ್ದುಪಡಿಸುವಲ್ಲಿನ ಪೈಪೋಟಿಯೇ ಜೋರಾಗಿದೆ.
ಈ ಘೋಷಣೆಗಳ ತುಲನಾತ್ಮಕ ಅಧ್ಯಯನವೂ ನಡೆದಿಲ್ಲ. ಹೀಗಾಗಿ ಇದನ್ನು ಕನಸು ಮಾರಾಟಗಾರರು' ಎನ್ನುವುದು ಅತ್ಯಂತ ಸೂಕ್ತವೇನೋ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾನು ನೀಡಿದ ಹತ್ತಾರು ಕೊಡುಗೆಗಳ ಬಗ್ಗೆ ಆಕ್ಷೇಪ ಬಂದಾಗ ಜಗ್ಗಲಿಲ್ಲ. ಆಶ್ವಾಸನೆಗೆ ಬದ್ಧ ಎಂದು ಸವಾಲೆಸೆದಿದ್ದರು. ಲಾಲು, ಮಾಯಾವತಿ, ಜಯಲಲಿತಾ ಇವರೆಲ್ಲ ಕೊಡುಗೆ ಪ್ರಣಾಳಿಕೆಯ ರುವಾರಿಗಳು... ಈ ಉಚಿತ ಕೊಡುಗೆಗಳನ್ನು ಟೀಕಿಸಿದ ಬಿಜೆಪಿ, ತನ್ನ ಪ್ರಣಾಳಿಕೆಯಲ್ಲಿ ಹಾಲು, ಅಕ್ಕಿ ಸೇರಿದಮತೆ ಹಲವು ಪುಕ್ಕಟೆ ಸ್ಕೀಮ್ ಘೋಷಿಸಿದೆ. ಈ ಹಿಂದಿನ ಆಶ್ವಾಸನೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಉಳುವವನೇ ಒಡೆಯ; ಗರೀಬಿ ಹಠಾವೋ, ನೀರಾವರಿ, ಶಿಕ್ಷಣ ಯೋಜನೆಗಳು. ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಕೊಂಡವು. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಕೇರಳ ಮತ್ತು ಕರ್ನಾಟಕಕ್ಕೆ ಸಲ್ಲಿತು. ಈಗ ಅಂತಹ ಘೋಷಣೆಗಳು ಪ್ರಣಾಳಿಕೆಯಲ್ಲಿ ಲಭ್ಯವೇ ಇಲ್ಲ. ಇದಕ್ಕೆ ಮತದಾರರಿಂದಲೂ ಪಾವಿತ್ರ್ಯತೆ, ಪ್ರಾಮುಖ್ಯತೆ, ಮಾನ್ಯತೆ ಇಲ್ಲವೇ ಇಲ್ಲ.... ಕಲ್ಯಾಣ ಯೋಜನೆಗಳ ಈಡೇರಿಕೆ, ಕಲ್ಯಾಣ ರಾಜ್ಯದ ಪರಿಕಲ್ಪನೆ ಉಳ್ಳವರ ಅಪೇಕ್ಷೆ. ಅಂತಹ ಯೋಜನೆಯನ್ನು ರೂಪಿಸಬೇಕಾದದ್ದೇ. ಆದರೆ ಈಗ ನಡೆಯುತ್ತಿರುವುದು ಜನಕಲ್ಯಾಣದ ಹೆಸರಿನಲ್ಲಿ, ಉಚಿತ ಕೊಡುಗೆಯ ನೆಪದಲ್ಲಿ ಶ್ರೀಮಂತರ ಪೋಷಣೆ, ಅದಕ್ಕನುಕೂಲವಾದ ಉದ್ಯೋಗ, ಭ್ರಷ್ಟಾಚಾರದ ವಾಸನೆ. ಹಾಗಾಗಿ ಈಗ ಪ್ರಣಾಳಿಕೆ ನೆಪದಲ್ಲಿ ಕನಸು ಮಾರುವವರಿಗೆ ಜೇನುಗೂಡಿಗೆ ಕೈ ಇಡುವುದು ಸುಲಭ... ನಂಬಿಕೆಯ ಜೇನು ತುಪ್ಪ ಸಿಗುವುದು ದುಸ್ತರ... ಸದ್ಯಕ್ಕಂತೂಬಜರಂಗಿ’ `ಮಂಗನಾಟ’ ಆರಂಭವಾಗಿದೆ.

Previous articleಪ್ರತಿಯೊಬ್ಬರು ಹಿರಿಯರನ್ನು ಗೌರವಿಸಿ
Next articleಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ