ಪೌರ ಕಾರ್ಮಿಕರ ಕಾಯಂಗೆ ಹಣ ವಸೂಲಿ: ಕ್ರಮಕ್ಕೆ ಆಗ್ರಹ

0
38

ದಾವಣಗೆರೆ: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿರುವ ಎಲ್ಲಾ ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ ಕಾಯಂಗೊಳಿಸಲು ಪೌರಕಾರ್ಮಿಕರಿಂದ ಲಕ್ಷಾಂತರ ರೂ. ಹಣ ವಸೂಲಿ ಆರೋಪ ಕೇಳಿ ಬಂದಿದೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಇದಕ್ಕೆ ಖುಷಿ ಪಡಬೇಕೋ, ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ. ಕಾಯಂಗೊಳಿಸಲು 3ರಿಂದ 5 ಲಕ್ಷ ರೂ. ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ಜೀವನ ನಡೆಸುವುದೇ ಕಷ್ಟ. ಕಾಯಂಗಾಗಿ ಮಹಿಳಾ ಪೌರಕಾರ್ಮಿಕರು ತಾಳಿ ಮಾರಿ ಹಣ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಗುತ್ತಿಗೆ ನೇಮಕಾತಿ ವೇಳೆಯಲ್ಲೂ ಕೂಡ ಲಕ್ಷಾಂತರ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವಿದೆ. ಇದನ್ನು ತಡೆಗಟ್ಟುವ ಕೆಲಸ ಆಗಬೇಕು. ಬಹಳ ನೋವಿನಿಂದ ಹೇಳುತ್ತೇನೆ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡು ಪ್ರಾಮಾಣಿಕವಾಗಿ ಪೌರಕಾರ್ಮಿಕರನ್ನು ಕಾಯಂಗೊಳಿಸಿದರೆ ಈ ದಿನ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗೆ ಒಂದು ಅರ್ಥ ಬರುತ್ತದೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಬಗ್ಗೆ ಈ ಹಿಂದೆ ನಡೆದ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದೆ. ಈಗ ಮುಖ್ಯಮಂತ್ರಿಗಳು ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಘೋಷಣೆ ಮಾಡಿ ಬಡವರ ಪರ ಬದ್ಧತೆ ಇರುವುದನ್ನು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Previous articleಮೈಸೂರು ಮಹಾರಾಜರಿಗೆ ಲಾಡ್ ತಿರುಗೇಟು
Next articleಜಾತಿ ಜನಗಣತಿ ಅನುಷ್ಠಾನ ಒಪ್ಪಲ್ಲ