ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದ ತುಂಬೆಲ್ಲ ಮಂಗಳವಾರ ಬಿರಿಯಾನಿ ಹಾಗೂ ಕಬಾಬ್ ಘಮ ಹರಡಿತ್ತು.
ಹೌದು, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ್ ಮನ್ನೆಕುಂಟ್ಲಾ ಅವರ ನವೀಕೃತ ಕಚೇರಿ ಉದ್ಘಾಟನೆ ನಿಮಿತ್ತ ಭರ್ಜರಿ ಬಾಡೂಟ ಮಾಡಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ಸರ್ಕಾರಿ ಕಚೇರಿ ಆವರಣದಲ್ಲಿ ಬಾಡೂಟ ತಯಾರು ಮಾಡಿ ಸೇವನೆ ಮಾಡುವುದು ಸರಿಯೇ ಎಂದು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದರೆ, ಅರೇ ಒಂದು ರೌಂಡ್ ಬಿರಿಯಾನಿ ಸವಿ ಸವಿದು ಹೋಗೋಣ ಎಂದು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ನೂರಾರು ಸಾರ್ವಜನಿಕರು ಬಾಡೂಟ ಸವಿದರು.
ಬಾಡೂಟಕ್ಕಾಗಿ ೨.೫ ಕ್ವಿಂಟಾಲ್ ಮಟನ್ ಬಿರಿಯಾನಿ, ೫೦ ಕೆ.ಜಿ. ಚಿಕನ್ ಬಿರಿಯಾನಿ ಹಾಗೂ ಕಬಾಬ್ ಮಾಡಿಸಲಾಗಿತ್ತು.
ಇದಕ್ಕೂ ಮುನ್ನ ಪಾಲಿಕೆ ವಿರೋಧ ಪಕ್ಷದ ನಾಯಕರ ನವೀಕೃತ ಕಚೇರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು.






















