ಬಿಡುಗಡೆ ಮಾಡುವುದು ಯಾವಾಗ? ಖರ್ಚು ಮಾಡುವುದು ಯಾವಾಗ?
ಬೆಂಗಳೂರು: 2024-25 ನೇ ಆರ್ಥಿಕ ವರ್ಷ ಮುಗಿಯಲು ಇನ್ನು ಕೇವಲ 2 ತಿಂಗಳು ಬಾಕಿ ಉಳಿದಿದ್ದರೂ SCSP/TSP ಯೋಜನೆಯ ಕಾರ್ಯಕ್ರಮಗಳ ಅಡಿಯಲ್ಲಿ ಹಂಚಿಕೆ ಮಾಡಬೇಕಾದ ₹16,429 ಕೋಟಿ ಹಣವನ್ನ ಬಿಡುಗಡೆ ಮಾಡದೆ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಗಿದೆ ಈ ದಲಿತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸ್ವಾಮಿ ಸಚಿವ ಡಾ. ಎಚ್‌ಸಿ ಮಹದೇವಪ್ಪನವರೇ, ಬರುವ ತಿಂಗಳು 2025-26ನೇ ಸಾಲಿನ ಬಜೆಟ್ ಮಂಡನೆ ಆಗಬೇಕಿದೆ. ಇನ್ನೆರಡು ತಿಂಗಳಲ್ಲಿ ಹೊಸ ಆರ್ಥಿಕ ವರ್ಷ ಜಾರಿಗೆ ಬರಲಿದೆ. ಆದರೆ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾದ ಶೇ. 41.46% SCSP/TSP ಅನುದಾನವನ್ನೇ ಇನ್ನೂ ಬಿಡುಗಡೆ ಮಾಡಿಲ್ಲ ಅಂದರೆ ಅದನ್ನು ಬಿಡುಗಡೆ ಮಾಡುವುದು ಯಾವಾಗ? ಖರ್ಚು ಮಾಡುವುದು ಯಾವಾಗ? ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಸುಮ್ಮನೆ ಕಾಟಾಚಾರಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾದರೂ ಯಾತಕ್ಕೆ? ಬಜೆಟ್‌ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತಾ?
ಇದೇನಾ ತಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ? ಇದೇನಾ ಸಿದ್ದರಾಮಯ್ಯನವರು ಮತ್ತು ತಾವು ಭಾಷಣ ಬಿಗಿಯುವ ಸಾಮಾಜಿಕ ನ್ಯಾಯ?
ಒಂದು ಕಡೆ ಬಿಡುಗಡೆ ಮಾಡಿರುವ ಅಲ್ಪ ಸ್ವಲ್ಪ ಅನುದಾನವನ್ನ ಲೂಟಿ ಹೊಡೆಯುತ್ತೀರಿ, ಮತ್ತೊಂದು ಕಡೆ ಘೋಷಣೆ ಮಾಡಿದ ಅನುದಾನವನ್ನ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳುತ್ತೀರಿ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ. ತಮಗೆ ಮತ್ತು ತಮ್ಮ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಅನ್ನುವುದು ಇದ್ದರೆ ಇನ್ನು ಮುಂದೆ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಬೇಡಿ ಎಂದಿದ್ದಾರೆ.