ಯಾದಗಿರಿ : ಪತಿ ಜೊತೆ ಜಗಳವಾಡಿ ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವಡಗೆರ ತಾಲ್ಲೂಕಿನ ಕಂಠಿ ತಾಂಡಾದಲ್ಲಿ ಮಂಗಳವಾರ ಜರುಗಿದೆ.
ಮೃತ ತಾಯಿ ನೀಲಾಬಾಯಿ (35), ಪುತ್ರಿಯರಾದ ರಾಜೇಶ್ವರಿ (10), ನಿಶಾ (4) ಕಂಠಿ ತಾಂಡಾದ ಪಕ್ಕದಲ್ಲಿ ಇರುವ ಬಾವಿಯಲ್ಲಿ ಹಾರಿ ಮೃತಪಟ್ಟಿದ್ದಾರೆ.
ಮೃತ ನೀಲಾಬಾಯಿಗೆ ಐದು ಜನ ಮಕ್ಕಳಿದ್ದು, ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಇದರಲ್ಲಿ ಬೇಬಿ (12 ವರ್ಷ) ಹಾಗೂ 11 ತಿಂಗಳ ಗಂಡು ಮಗು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಮೃತ ಮಹಿಳೆ ತನ್ನ ಮೂರು ಜನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಾವಿಗೆ ಹೋಗಿದ್ದಾಳೆ. ಮೊದಲು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ನೂಕಿದ್ದಾರೆ. ಮೂರನೆ ಹೆಣ್ಣು ಮಗು ಸಂಜು (6) ಗೆ ಬಾವಿಗೆ ನೂಕುವಾಗ ಆ ಮಗು ತಾಯಿಯಿಂದ ತಪ್ಪಿಸಿಕೊಂಡು ಬಂದು ತಾಂಡಾದಲ್ಲಿ ಹೇಳಿದಾಗ ತಾಂಡಾ ವಾಸಿಗಳು ಬಾವಿಗೆ ಹೋಗುವಷ್ಟರಲ್ಲಿ ಮೂರು ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ವಡಗೇರಾ ತಹಶೀಲ್ದಾರ್ ಶ್ರೀನಿವಾಸ ಚಾಪೇಲ್ ಬೇಟಿ ನೀಡಿದ್ದಾರೆ.