ನೊಂದ ಮಹಿಳೆಯರಿಂದ ಠಾಣೆಗೆ ತೆರಳಿ ಮನವಿ

ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧದ ಹಿನ್ನೆಲೆ ಇರದೆ, ಯಾವುದೇ ಪ್ರಕರಣಗಳಲ್ಲಿಯು ಭಾಗಿಯಾಗದೆ, ಸಾಮಾಜಿಕ ಹೋರಾಟಗಾರರು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಆರ್ ಎಸ್ ಎಸ್ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕತರ ಮನೆಗೆ  ಮಧ್ಯರಾತ್ರಿ ತೆರಳಿ ವಿನಾಕಾರಣ ಕಿರುಕುಳ ನೀಡತ್ತಿದ್ದು,ಈ ಅತಿರೇಕದ ಪ್ರವೃತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ ನೊಂದ ಮಹಿಳೆಯರು ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಸಂಘಪರಿವಾರದ ಪ್ರಮುಖರು,ಕಾರ್ಯಕರ್ತರು ಅದರಲ್ಲು ಯಾವುದೇ ಪ್ರಕರಣದಲ್ಲು ಗುರುತಿಸಿಕೊಳ್ಳದ ಹಿರಿಯರ ಮನೆಗೆ ತಡರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಅಮಾನವೀಯವಾಗಿ ವರ್ತಿಸುವುದಲ್ಲದೆ ವೈಯುಕ್ತಿಕ ಛಾಯಾ ಚಿತ್ರಗಳನ್ನು ತೆಗೆದು, ಮನೆಯ ಜಿ.ಪಿ.ಎಸ್ ದಾಖಲಿಸಿ ಭಯ ಮತ್ತು ಆತಂಕ ನಿರ್ಮಿಸುವುದು ನಮ್ಮ ಖಾಸಗಿ ಜೀವನಕ್ಕೆ ಮತ್ತು ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟು ಮಾಡುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.  ನೊಂದ ಮಹಿಳೆಯರ ನಿಯೋಗ ಗುರುವಾರ ಸಂಜೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಬೇಟಿ ನೀಡಿ ಮನವಿ ಸಲ್ಲಿಸಿ ಪೊಲೀಸ್  ಸಿಬ್ಬಂದಿಗಳ ಈ ಅತಿರೇಕದ ವರ್ತನೆಯನ್ನು ತಕ್ಷಣ ನಿಲ್ಲಿಸಬೇಕಲ್ಲದೆ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮಹಿಳಾ ನಿಯೋಗ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು.

ಪೊಲೀಸರು ಈ ಅನುಚಿತ ವರ್ತನೆಯನ್ನು ಮುಂದುವರಿಸಿದಲ್ಲಿ ಅಗಬಹುದಾದ ಬೆಳವಣಿಗೆಗೆ ಪೊಲೀಸ್ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.
ನಿಯೋಗದಲ್ಲಿ ಪ್ರಮುಖರಾದ ಗಿರಿಜಾ, ಪೂರ್ಣಿಮಾ, ಲಖಿತಾ ಆರ್.ಶೆಟ್ಟಿ, ಸುಲೋಚನ ಭಟ್ ಜಿ‌.ಕೆ.ಭಟ್,ಹರ್ಷಿಣಿ ಪುಂಜಾಲಕಟ್ಟೆ, ಜಯಶ್ರೀ, ಭವಾನಿ,ರೂಪ ಮತ್ತಿತರರಿದ್ದರು.