ನೇಹಾ ಕೊಲೆ ವಿಚಾರಣೆ ಇಂದಿನಿಂದ

0
39

ಹುಬ್ಬಳ್ಳಿ: ಒಂದು ವರ್ಷದ ಹಿಂದೆ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆಯನ್ನು ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಏ. 29ರಂದು ಕೈಗೆತ್ತಿಕೊಳ್ಳಲಿದ್ದು, ನ್ಯಾಯಮೂರ್ತಿ ಪರಮೇಶ್ವರ ಪ್ರಸನ್ನ ವಿಚಾರಣೆ ನಡೆಸಲಿದ್ದಾರೆ.
ಸಿಐಡಿ ಅಧಿಕಾರಿಗಳಿಂದ ನೇಮಕವಾದ ವಕೀಲರು ಮೃತ ನೇಹಾ ಹಿರೇಮಠ ಪರ ವಾದ ಮಂಡಿಸಲಿದ್ದಾರೆ. ಆರೋಪಿ ಫಯಾಜ್ ಪರ ವಕಾಲತ್ತು ವಹಿಸಲು ಹುಬ್ಬಳ್ಳಿಯ ವಕೀಲರು ಮುಂದೆ ಬಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ವಕೀಲರ ನೇಮಕ ಮಾಡಲಾಗಿದೆ.
ಏತನ್ಮಧ್ಯೆ ಕೊಲೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಆರೋಪಿ ಫಯಾಜ್ ಮನವಿ ಮಾಡಿದ್ದ. ಧಾರವಾಡ ಹೈಕೋರ್ಟ್‌ನಲ್ಲಿ ಸೋಮವಾರ ನಡೆದ ಪ್ರಕರಣ ವರ್ಗಾವಣೆ ವಿಚಾರಣೆಯಲ್ಲಿ ವಕೀಲರಾದ ಝೆಡ್.ಆರ್. ಮುಲ್ಲಾ, ಆರೋಪಿ ಫಯಾಜ್ ಪರವಾಗಿ ವಾದ ಮಂಡನೆ ಮಾಡಿದ್ದರು. ಪ್ರತಿವಾದ ಮಾಡಿದ್ದ ರಾಘವೇಂದ್ರ ಎಸ್, ಎಂ.ಬಿ. ಹಿರೇಮಠ ಹಾಗೂ ಪ್ರಕಾಶ್ ಅಂದಾನಿಮಠ ವಕೀಲರ ತಂಡ ಹತ್ಯೆಯನ್ನು ನೋಡಿರುವ ಪ್ರಮುಖ 99 ಸಾಕ್ಷಿಗಳು ಹುಬ್ಬಳ್ಳಿಯಲ್ಲಿವೆ. ಹೀಗಾಗಿ, ಪ್ರಕರಣದ ವಿಚಾರಣೆ ಹುಬ್ಬಳ್ಳಿಯಲ್ಲೇ ಆರಂಭ ಮಾಡಬೇಕೆಂದು ಪ್ರತಿವಾದ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸ ಅವರು ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ವಿಚಾರಣೆ ಆರಂಭಿಸುವಂತೆ ಆದೇಶಿಸಿದ್ದಾರೆ.

Previous articleಅಕ್ಷಯ ತೃತೀಯಕ್ಕೂ ಮುನ್ನವೇ ಗಗನಕ್ಕೇರುತ್ತಿರುವ ಚಿನ್ನದ ಬೆಲೆ
Next articleಪಾಕಿಗಳನ್ನು ಹೊರಹಾಕುವ ಕುರಿತ ಗೊಂದಲ ನಿವಾರಿಸಿ