ನಿಗಮ, ಮಂಡಳಿ ನೇಮಕ ಮತ್ತೆ ನೂರೆಂಟು ಸಮಸ್ಯೆ

0
15
ವಿಧಾನಸೌಧ

ಬೆಂಗಳೂರು: ನಿಚ್ಚಳ ಬಹುಮತದ ಸರ್ಕಾರ ರಚನೆಯಾಗಿ ಏಳು ತಿಂಗಳು ಕಳೆಯುತ್ತಾ ಬಂದರೂ ನಿಗಮ, ಮಂಡಳಿಗಳ ನೇಮಕಾತಿ ನಿರಂತರ ನನೆಗುದಿಗೆ ಬೀಳುತ್ತಿದೆ. ಸಿಎಂ, ಡಿಸಿಎಂ ಚರ್ಚಿಸಿ ಸಿದ್ಧಪಡಿಸಿದ್ದ ಪಟ್ಟಿಗೆ ವರಿಷ್ಠರು ಸರ್ಜರಿ ಮಾಡಿರುವುದೇ ಇದೀಗ ಸಮಸ್ಯೆಯಾಗಿದೆ. ಜೊತೆಗೆ ಕೆಲವು ಸಚಿವರು ಹಾಗೂ ಪಕ್ಷ ಪ್ರಮುಖರ ಆಕ್ಷೇಪವೂ ವ್ಯಕ್ತಗೊಂಡಿದ್ದು ಪಟ್ಟಿ ಬಿಡುಗಡೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಬೆನ್ನಲ್ಲೇ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ನಾಯಕರ ಸಭೆ ಶುಕ್ರವಾರ ನಡೆಸಲಿದ್ದಾರೆ.
೩೬ ಶಾಸಕರು ಹಾಗೂ ೩೯ ಮಂದಿ ಕಾರ್ಯಕರ್ತರನ್ನೊಳಗೊಂಡ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚರ್ಚೆ ಬಳಿಕ ಹೈಕಮಾಂಡ್‌ಗೆ ರವಾನಿಸಿದ್ದರು.
ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಸಹಿ ಬೀಳುವ ಮುನ್ನ ಕಾರ್ಯಕರ್ತರ ಪಟ್ಟಿಯಲ್ಲಿ ಏಳೆಂಟು ಹೆಸರುಗಳು ಬದಲಾಗಿದ್ದವು. ಈ ವಿದ್ಯಮಾನ ಸಿಎಂ, ಡಿಸಿಎಂ ಮಾತ್ರವಲ್ಲದೆ ಅಧ್ಯಕ್ಷ ಆಕಾಂಕ್ಷಿಗಳ ಕಣ್ಣನ್ನೂ ಕೆಂಪು ಮಾಡಿತ್ತು. ವಿವಾದ ಭುಗಿಲೇಳುವ ಮುನ್ಸೂಚನೆ ದೊರೆತ ಬೆನ್ನಲ್ಲೇ ವರಿಷ್ಠರು ಪಟ್ಟಿ ಘೋಷಣೆಯನ್ನು ಮುಂದೂಡಿದ್ದರು.
ಆದರೆ ಪರಿಷ್ಕೃತ ಹೆಸರುಗಳ ¨ಗ್ಗೆಯೇ ಇದೀಗ ತೀವ್ರ ಅಸಮಾಧಾನ ಸೃಷ್ಟಿಯಾಗಿದೆ. ಜಿಲ್ಲಾಮಟ್ಟದಲ್ಲಿ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ಪರಿಗಣಿಸುವ ಬಗ್ಗೆ ತಮ್ಮ ಅಭಿಪ್ರಾಯವನ್ನೇ ಪಡೆದಿಲ್ಲ ಎಂದು ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ, ಎಲ್ಲವನ್ನೂ, ಎಲ್ಲರನ್ನೂ ಕೇಳಿಯೇ ಮಾಡಲಾಗದು. ಚರ್ಚೆ ಮಾಡಿಯೇ ಪಟ್ಟಿ ಸಿದ್ಧಪಡಿಸಿದ್ದು ಹೈಕಮಾಂಡ್ ಅಂಕಿತಕ್ಕೆ ಬಾಕಿ ಇದೆ ಎಂದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲರ ಅಭಿಪ್ರಾಯ ಪಡೆದು, ಮಾರ್ಗಸೂಚಿ ನಿಗದಿ ಮಾಡಿದ್ದು ಅದರನ್ವಯವೇ ಅಧಿಕಾರ ಹಂಚಲಾಗುವುದು ಎಂದು ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ದಿನಕಳೆದಂತೆ ಅಸಹನೆ ಹೆಚ್ಚುತ್ತಿದೆ. ಇನ್ನೂ ಎಷ್ಟು ದಿನ ಎಂದು ಕಾಯುವುದು. ಮುಂಬರುವ ಚುನಾವಣೆ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸುವ ಮುನ್ನ ಸ್ಥಾನಮಾನ ಕೊಡಿ ಎಂದು ಹೈಕಮಾಂಡ್‌ಗೆ ಸಡ್ಡುಹೊಡೆದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಸಿಎಂ, ಡಿಸಿಎಂ ಅಲ್ಲದೆ ಕೆಲವು ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪರಿಷ್ಕೃತ ಪಟ್ಟಿಯನ್ನು ಬದಲಾಯಿಸುವಂತೆ ಪಟ್ಟು ಹಿಡಿದರೆ ಮತ್ತೆ ಸಮಸ್ಯೆ ಉಲ್ಬಣವಾಗುವುದು ಖಚಿತ. ಹಾಗಾಗಿ ಸುರ್ಜೇವಾಲಾ ಅವರ ಮುಂದೆ ಸವಾಲು ಎದುರಾಗಿದ್ದು ಹೇಗೆ ನಿಭಾಯಿಸುವರು ಎಂಬುದು ಕುತೂಹಲ ಕೆರಳಿಸಿದೆ.

Previous articleಶ್ರೀ ರಾಮ-ಬಸವಣ್ಣರ ಬಿಂಬದಲ್ಲಿ ಅಪಸವ್ಯಗಳೇಕೊ…
Next articleರಾಜ್ಯಕ್ಕೆ ೨೩,೦೦೦ ಕೋಟಿ ರೂ. ಬಂಡವಾಳ ಹೂಡಿಕೆ ವಿಶ್ವಾಸ