ನಾನು ಪಾಳೆಗಾರ ಅಲ್ಲ, ಕ್ಷೇತ್ರದ ಕಾವಲುಗಾರ

0
40

ಮಂಗಳೂರು: ʼಶಾಸಕ ವೇದವ್ಯಾಸ ಕಾಮತ್ ಏನು ಇಲ್ಲಿನ ಪಾಳೇಗಾರನʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಕೇಳಿದ್ದಕ್ಕೆ ನಾನು ಉತ್ತರ ಕೊಡುವುದಿಲ್ಲ. ಬದಲಿಗೆ ʼಪಾಳೆಗಾರ ಅಲ್ಲ ಕಾವಲುಗಾರʼ ಎಂದು ಕ್ಷೇತ್ರದ ಜನತೆಯೇ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರು ಮೊದಲು ಅರಗಿಸಿಕೊಳ್ಳಲಿ ಸಾಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯದ ಮೇಯರ್‌ರವರು ಜಿಲ್ಲಾಡಳಿತ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ, ಮಾಹಿತಿ ನೀಡಿಯೇ ಮಂಗಳಾದೇವಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯನ್ನು ನಡೆಸಿದ್ದು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮರು ಉದ್ಘಾಟನೆ ಮಾಡಿ ತಮ್ಮ ನಿಜ ಮಾನಸಿಕತೆಯನ್ನು ತೋರಿಸಿದ್ದಾರೆ. ಇದು ಇಡೀ ಪರಿಶಿಷ್ಟ ಸಮುದಾಯಕ್ಕಾದ ಅವಮಾನವಾಗಿದೆ ಎಂದರು.
ಆರೋಗ್ಯ ಕೇಂದ್ರದಲ್ಲಿದ್ದ ಬಡ ರೋಗಿಗಳನ್ನು ಹೊರದಬ್ಬಿ, ಕೇವಲ ನಾಲ್ಕೇ ದಿನಕ್ಕೆ ಬೀಗ ಹಾಕಿ, ಸ್ವಪ್ರತಿಷ್ಠೆ ಹಾಗೂ ರಾಜಕೀಯಕ್ಕಾಗಿ ಮರು ಉದ್ಘಾಟನೆ ಎಂಬ ಹೊಸ ಮತ್ತು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕಾಂಗ್ರೆಸ್ಸಿಗೆ ಕಿಂಚಿತ್ತಾದರೂ ಶೋಭೆ ಇದೆಯೇ? ಈಗ ಈ ಗೊಂದಲಕ್ಕೆ ಶಾಸಕರೇ ಕಾರಣ ಎಂದು ಆರೋಪಿಸುವ ಬದಲು, ಹೇಗೂ ನಿಮ್ಮದೇ ಸರ್ಕಾರವಿದೆ, ಮಂಗಳಾದೇವಿಯ ಆರೋಗ್ಯ ಕೇಂದ್ರದ ಉದ್ಘಾಟನೆ ವಿಷಯದಲ್ಲಿ ನಾನು ಅಟೆಂಡರ್ ನಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ಯಾವನೇ ಒಬ್ಬನಿಗೆ ಕರೆ ಮಾಡಿದ್ದರೂ ತನಿಖೆ ಮಾಡಿಸಿ ನೋಡೋಣ. ಇಲ್ಲದಿದ್ದರೆ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು.
ಶಿಷ್ಟಾಚಾರದ ಪ್ರಕಾರ ಮರು ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿದ್ದೇವೆ ಎನ್ನುತ್ತಿರುವ ಕಾಂಗ್ರೆಸ್ಸಿಗರು ವೇದಿಕೆಯಲ್ಲಿ ಮಾಜಿ ಶಾಸಕರ ಸಹಿತ ಕಾಂಗ್ರೆಸ್ ಕಾರ್ಯಕರ್ತರನ್ನು ಕೂರಿಸಿದ್ದು ಯಾವ ಶಿಷ್ಟಾಚಾರ? ಇದೇ ಪ್ರಕಾರ ಹೋದರೆ, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಸಮಯವನ್ನು ಕೊಡುವುದಿಲ್ಲ. ಹಾಗಾದರೆ ನಾವು ಕೂಡ ಉಳಿದ ಕಾರ್ಯಕ್ರಮಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆ ತರಬಹುದೇ? ಎಂದು ತರಾಟೆಗೆ ತೆಗೆದುಕೊಂಡರು.

Previous articleನೇಕಾರರ ಸರಣಿ ಆತ್ಮಹತ್ಯೆ ನಿಲ್ಲಲು ಸರ್ಕಾರ ನಿಗಾ ವಹಿಸಲಿ
Next articleನೇಕಾರ ಆತ್ಮಹತ್ಯೆಗೆ ಮೈಕ್ರೋ, ಸಹಕಾರಿ ಸಂಘಗಳ ಸಾಲ ಕಾರಣ: ಕೊಣ್ಣೂರ