Home Advertisement
Home ಕಾರ್ಟೂನ್ ನಾ ರೆಡಿ ಇದೀನಿ ಆಫರ್ ಮಾಡೋರು ಇಲ್ಲ

ನಾ ರೆಡಿ ಇದೀನಿ ಆಫರ್ ಮಾಡೋರು ಇಲ್ಲ

0
121

ನಮ್ಮ ಕಡೆ ಬಂದರೆ ಕಮಲದ ಹೂವಿನಲ್ಲಿ ನೂರು ಕೋಟಿ ರೂ. ಇಟ್ಟು ಉಡಿತುಂಬುತ್ತೇನೆ ಎಂದರು ಎಂದು ಅವ ಹೇಳುತ್ತಾನೆ. ಕೈನವರು ಅಯ್ಯೋ ಅಲ್ಲೇನಿಟ್ಟೀರಿ ಈ ಕಡೆ ಬಂದುಬಿಡಿ ಅವರಿಗಿಂತ ಒಂದು ರೂಪಾಯಿ ಹೆಚ್ಚು ಇಟ್ಟು ಕೊಡುತ್ತೇವೆ ಅಂದಿದ್ದಾರೆ ಎಂದು ಇಂವ ಹೇಳುತ್ತಾನೆ. ನಮಗಂತೂ ಅಷ್ಟಿಲ್ಲ ಸ್ವಾಮಿ ಇಕ್ವಲ್ ಮಾಡಿ ಕೊಡುತ್ತೇವೆ ನಮ್ಮ ಕಡೆ ಬಂದುಬಿಡಿ ಇಲ್ಲೇ ಇದ್ದು ಬಿಡೋಣ ಎಂದು ಆ ತನೆ ಮಂದಿ ಅಂದಿದ್ದಾರೆ ಎಂದು ಮತ್ತೊಬ್ಬ ಹೇಳುತ್ತಾನೆ. ನಮಗೆ ಯಾವನೂ ಒಂದು ರೂಪಾಯಿ ಕೊಡುತ್ತೇನೆ ಎಂದು ಈವರೆಗೂ ಹೇಳಲಿಲ್ಲ ಎಂದು ಲೊಂಡೆನುಮ ಭಾರೀ ಬೇಜಾರು ಮಾಡಿಕೊಂಡಿದ್ದಾನೆ. ಸಿಕ್ಕಸಿಕ್ಕವರ ಮುಂದೆ ನೋಡಿ ನಾನೂ ಮೂವತ್ತು ವರ್ಷ ರಾಜಕಾರಣದಲ್ಲಿ ಇದ್ದೇನೆ. ಮೂರು ಬಾರಿ ಗ್ರಾಮಪಂಚಾಯ್ತಿ ಮೆಂಬರ್ ಆಗಿದ್ದೇನೆ. ಎರಡು ಸಲ ತಾಪಂಗೆ ಸೋತಿದ್ದೇನೆ. ಜಿಪಂಗೆ ಟಿಕೆಟ್ಟೇ ಕೊಡಲಿಲ್ಲ. ಪ್ರತಿ ಎಲೆಕ್ಷನ್ನಿನಲ್ಲಿಯೂ ಸಹ ಬೆವರು ಸುರಿಸಿ ದುಡಿಯುತ್ತೇನೆ. ರಾಜಕಾರಣ ಬುಟ್ಟುಬುಡು ಅಂತ ನನ್ನ ಹೆಂಡತಿ ದಿನಾಲೂ ಬಯ್ಯುತ್ತಾಳೆ. ಇವತ್ತಿಲ್ಲ ನಾಳೆ ಏನಾದರೂ ಒಳ್ಳೆಯದು ಆಗುತ್ತದೆ ಎಂದು ನಾನೂ ಸಮಾಧಾನ ಹೇಳಿದ್ದೇನೆ. ಈಗ ನೋಡಿ ಎಲ್ಲೆಲ್ಲೋ ಇದ್ದವರಿಗೆ ನೂರು ಕೋಟಿ..ಇನ್ನೂರು ಕೋಟಿ ಕೊಡುತ್ತೇನೆ ಅಂತಿದಾರಂತೆ. ನಾನು ತೆಗೆದುಕೊಳ್ಳುವುದಕ್ಕೆ ರೆಡಿ ಇದೀನಿ ಸ್ವಾಮಿ ಆದರೆ ಕೊಡುವವರು ಯಾರೂ ಇಲ್ಲ ಅಂತ ಗೋಗರೆಯುತ್ತಿದ್ದ. ತಳವಾರ್ಕಂಟಿಗೆ ಈ ವಿಷಯ ಗೊತ್ತಾಗಿ ಅವನು ಲೊಂಡೆನುಮನನ್ನು ಭೇಟಿಯಾಗಿ ಬಾ ನಿನಗೊಂದು ಐಡಿಯಾ ಕೊಡುತ್ತೇನೆ ಎಂದು ಎಲ್ಲಿಗೆ ಕರೆದುಕೊಂಡು ಹೋಗಬಾರದೋ ಅಲ್ಲಿಗೆ ಕರೆದುಕೊಂಡು ಹೋಗಿ…ನೋಡು ನೀನು…ಇಂಗಿಂಗೆ ಎದುರಿನ ಪಾರ್ಟಿಯವರು ನನಗೆ ೫೦ ಕೋಟಿ ಕೊಡುತ್ತೇನೆ ಎಂದು ಬಂದಿದ್ದಾರೆ ಎಂದು ಪೇಪರ್‌ನಲ್ಲಿ ಹಾಕಿಸು ಎಂದು ಹೇಳಿದ. ಮರುದಿನ ಲೊಂಡೆನುಮ ಎಲ್ಲ ಪೇಪರ್‌ನಲ್ಲಿ ನಾನು ಇಂಥ ಪಾರ್ಟಿಯವನು ಎದುರಾಳಿಯವರು ನನಗೆ ೫೦ ಕೋಟಿ ರೂ. ಆಫರ್ ಮಾಡಿದ್ದಾರೆ ಎಂದು ಹಾಕಿಸಿದ. ಮರುಕ್ಷಣವೇ ಅವನಿದ್ದ ಪಾರ್ಟಿ ಅಧ್ಯಕ್ಷರು ಫೋನು ಮಾಡಿ ಲೊಂಡೆನ್ಮಂತ…ನಿನಗೆ ೫೦ ಕೊಡುತ್ತೇನೆ ಎಂದರೆ ಎಸ್ ಅಂದು ಹೋಗಿಬಿಡು ಅದರಲ್ಲಿ ನನಗೆ ಹತ್ತುಕೊಟ್ಟುಬಿಡು ಎಂದು ಹೇಳಿ ಫೋನಿಟ್ಟ.

Previous articleಕ್ಷಯ ರೋಗ ಮಾನವನ ಜೀವಕ್ಕೆ ಮಾರಣಾಂತಿಕ
Next articleಬಾಹ್ಯಾಕಾಶಕ್ಕೆ ಹಾರಲಿವೆ ಧಾರವಾಡದ ನೊಣಗಳು