ನಕಲಿ ಸರ್ಟಿಫಿಕೇಟ್ ಪ್ರಕರಣ: 28ರಂದು ಸಿಂಡಿಕೇಟ್ ಸಭೆ

ಬಳ್ಳಾರಿ: ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಸಿಂಡಿಕೇಟ್ ಸಭೆ ಮಾ. 28ರಂದು ನಡೆಯಲಿದ್ದು, ಕುಲಪತಿಗಳ ಫೋರ್ಜರಿ ಸಹಿಯೊಂದಿಗೆ ವಿತರಣೆಯಾಗಿರುವ ಸುಮಾರು 3500 ನಕಲಿ ಪ್ರಮಾಣ ಪತ್ರಗಳ ಪ್ರಕರಣ ಕುರಿತು ನಿರ್ಧಾರ ಹೊರ ಬೀಳುವ ನಿರೀಕ್ಷೆಯಿದೆ.
ವಿವಿಯ ಹಣಕಾಸು ಅಧಿಕಾರಿ ನಾಗರಾಜ ನಾಯಕ, ಕುಲಸಚಿವ ರುದ್ರೇಶ್ ಅವರನ್ನೊಳಗೊಂಡ 9 ಉನ್ನತ ಅಧಿಕಾರಿಗಳ ತಂಡ ವಿವಿಯಲ್ಲಿ ಪತ್ತೆಯಾದ ಒಟ್ಟು ನಕಲಿ ಪ್ರಮಾಣ ಪತ್ರಗಳ ಅಂಕಿ-ಸಂಖ್ಯೆ, ಶಂಕೆ ಇರುವ ಉನ್ನತ ಅಧಿಕಾರಿಗಳ ಹೆಸರು ಸೇರಿ ಎಲ್ಲವನ್ನೂ ಒಳಗೊಂಡ ಸಮಗ್ರ ವರದಿ ಸಿದ್ಧಪಡಿಸಿದ್ದಾರೆ. ಆದರೆ ಅಧಿಕೃತವಾಗಿ ಈ ವರದಿ ಇನ್ನು ವಿವಿಯ ಕುಲಪತಿಗಳಿಗಾಗಲಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಅಧಿಕಾರಿಗಳ ಕೈಗಾಗಲಿ ನೀಡಿಲ್ಲ. ಮಾ. 28ರಂದು ಕರೆದಿರುವ ಸಿಂಡಿಕೇಟ್ ಸಭೆಯಲ್ಲಿಯೇ ವರದಿಯಲ್ಲಿನ ಅಂಶಗಳು ಬಯಲಾಗಲಿವೆ.
ವಿಎಸ್‌ಕೆ ವಿವಿ ಸಿಂಡಿಕೇಟ್‌ಗೆ ಒಟ್ಟು 20 ಜನ ಸದಸ್ಯರಿದ್ದಾರೆ. ರಾಜ್ಯಪಾಲರ ನಾಮನಿರ್ದೇಶಿತ-2, ಸರಕಾರಿ ನಾಮನಿರ್ದೇಶಿತ-6 ಜನ ವಿವಿಯ ಕುಲಪತಿ, ಕುಲಸಚಿವರು, ಡೀನ್, ಪ್ರಿನ್ಸಪಲ್ಸ್ ಹಾಗೂ ಇಲಾಖೆಯ ಮುಖ್ಯಸ್ಥರು ಸದಸ್ಯರಾಗಿದ್ದಾರೆ.