ದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಮಹಿಳೆಯರಿಬ್ಬರ ದಾರುಣ ಸಾವು

0
26

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಧಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ಸುಳೇಭಾವಿ ಗ್ರಾಮದ ಸವಿತಾ ಫಕೀರಪ್ಪ ಒಂಟಿ(34) ಹಾಗೂ ಕಲಾವತಿ ಮಾರುತಿ ಬಿದರವಾಡಿ(41) ಎಂದು ಗುರುತಿಸಲಾಗಿದೆ.
ವಾಲ್ಮೀಕಿ ದೇವಸ್ಥಾನದಲ್ಲಿ ಮಹಿಳಾ ಸಂಘದ ವಾರದ ಸಭೆ ನಡೆಸಿದ ಬಳಿಕ ದೇವಸ್ಥಾನವನ್ನು ಎಲ್ಲ ನೀರಿನಿಂದ ತೊಳೆದು ಮಹಿಳೆಯರು ಸ್ವಚ್ಛಗೊಳಿಸಿದ್ದರು. ಸ್ವಚ್ಛ ಮಾಡಿದ ನೀರಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಕೆಳಕ್ಕೆ ಬಿದ್ದಿತ್ತು. ಎಲ್ಲ ಕೆಲಸ ಮುಗಿಸಿ ಹೊರಗೆ ಬರುವಾಗ ಕಬ್ಬಿಣದ ಗೇಟ್ ಹಾಕುವಾಗ ಓರ್ವ ಮಹಿಳೆಗೆ ವಿದ್ಯುತ್ ಸ್ಪರ್ಶವಾಗಿದೆ. ಕೂಡಲೇ ಈಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ವಿದ್ಯುತ್ ತಗುಲಿದೆ.
ವಿದ್ಯುತ್ ಸ್ಪರ್ಶಗೊಂಡು ಸವಿತಾ ಒಂಟಿ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೋರ್ವ ಮಹಿಳೆ ಕಲಾವತಿ ವಿದರವಾಡಿಯನ್ನು ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಘಟನೆ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous articleನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟ
Next articleಡೆಂಗ್ಯೂ ಪ್ರಕರಣಗಳ ಸಾರ್ವಕಾಲಿಕ ದಾಖಲೆ