ದೆವ್ವ ಬಿಡಿಸಲು 17 ಲಕ್ಷ ಕಳೆದುಕೊಂಡ ಮಹಾತಾಯಿ!

ಅಭಯ ಮನಗೂಳಿ
ಬಾಗಲಕೋಟೆ: ಮಗಳಿಗೆ ದೆವ್ವ ಅಂಟಿಕೊಂಡಿದೆ ಎಂಬ ಮಂತ್ರವಾದಿಯ ಮಾತು ನಂಬಿದ ಮಹಾತಾಯಿಯೊಬ್ಬಳು ಬರೋಬ್ಬರಿ ೧೭ ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈಗ ಮೋಸ ಹೋಗಿರುವುದು ಅರಿವಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ತೇರದಾಳದಲ್ಲಿ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಅವರ ತವರು ಮನೆ ಬಾಗಲಕೋಟೆಯಲ್ಲಿದೆ. ತನ್ನ ಮಗಳಿಗೆ ಪದೇ, ಪದೆ ಜ್ವರ ಬರುತ್ತಿರುವುದನ್ನು ಕಂಡು ಆತಂಕಕ್ಕೆ ಒಳಗಾದ ಆಕೆ ಸಂಬಂಧಿಕರು, ಸ್ನೇಹಿತರೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ಆಗ ಸ್ನೇಹಿತೆ ನೀಡಿದ ಸಲಹೆಯಂತೆ ಕೊಲ್ಲಾಪುರದ ಮಂತ್ರವಾದಿ ಸೀಮಾ ಸುರೇಶ ಶೆಟ್ಟಿ ಎಂಬಾಕೆಯನ್ನು ಸಂಪರ್ಕಿಸಲಾಗಿದೆ. ಆಕೆ ನಿಮ್ಮ ಮಗಳಿಗೆ ದೆವ್ವ ಅಂಟಿಕೊಂಡಿದೆ. ಅದಕ್ಕಾಗಿ ವಿವಿಧ ಪೂಜೆಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾಳೆ. ಇದನ್ನು ನಂಬಿದ ಲಕ್ಷ್ಮೀ, ಮಗಳ ಆರೋಗ್ಯಕ್ಕಾಗಿ ಹಣ ನೀಡಿ ಮೋಸ ಹೋಗಿದ್ದಾರೆ. ಈಗ ಹಣವನ್ನು ವಾಪಸ್ ಕೊಡಿಸುವಂತೆ ನವನಗರದ ಸಿಇಎನ್ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂತ್ರವಾದಿ ಮಹಿಳೆಯ ಹಿಂದೆ ಬಿದ್ದಿದ್ದಾರೆ.

ಕೇಳಿದಂತೆ ಹರಿಯಿತು ಹಣ!
೨೦೨೪ರ ಸೆಪ್ಟಂಬರ್ ೨೪ ರಿಂದ ೨೦೨೫ರ ಮೇ.೭ರ ವರೆಗೂ ಮಂತ್ರವಾದಿ ಸೀಮಾ ಸುರೇಶ ಶೆಟ್ಟಿ ಕೇಳಿದಂತೆಲ್ಲ ಲಕ್ಷ್ಮೀ ಹಣ ಹಾಕಿದ್ದಾರೆ. ಮೊದಲ ಬಾರಿಗೆ ಪೂಜೆಗೆಂದು ಲಕ್ಷ ರೂ. ಕಳುಹಿಸಿದ್ದು, ಸೀಮಾ ಅದನ್ನೇ ಬಂಡವಾಳ ಮಾಡಿಕೊಂಡು ಪದೇ, ಪದೇ ಹಣ ಕೇಳಿದ್ದಾಳೆ. ಮಗಳು ಗುಣಮುಖಳಾದರೆ ಸಾಕು ಎಂದು ಲಕ್ಷ್ಮೀ, ಸೀಮಾ ಕೇಳಿದಂತೆಲ್ಲ ಹಣ ಹಾಕುತ್ತಲೇ ಹೋಗಿದ್ದಾರೆ. ಕೊನೆಗೆ ೧೭,೧೧,೦೦೧ ರೂಪಾಯಿ ಹಾಕಿದ ನಂತರವೂ ಮಗಳಿಗೆ ಜ್ವರ ಬಂದಾಗ ಲಕ್ಷ್ಮೀಗೆ ತಾನು ಮೋಸ ಹೋಗುತ್ತಿರುವುದು ಅರಿವಾಗಿದೆ. ವಂಚಕಿ ಮಂತ್ರವಾದಿಯ ವಂಚನೆ ಜಾಲ ಹಬ್ಬದಿರಲಿ ಎಂದು ಈಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಅತ್ತೆ ದೆವ್ವ ಬಂತಂತೆ
ವಂಚಕಿ ಸೀಮಾ ಸುರೇಶ ಶೆಟ್ಟಿ ಲಕ್ಷ್ಮೀಯನ್ನು ಪುಸಲಾಯಿಸಿ ಕಥೆಯೊಂದನ್ನು ಹೆಣೆದಿದ್ದಾಳೆ. ಲಕ್ಷ್ಮೀಗೆ ಅತ್ತೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ನಿಮ್ಮ ಅತ್ತೆಯೇ ದೆವ್ವವಾಗಿ ಮಗಳ ಮೈಮೇಲೆ ಬರುತ್ತಿದ್ದಾಳೆ ಎಂದು ಕಥೆ ಕಟ್ಟಿದ್ದಾಳೆ. ಕಾಕತಾಳೀಯವಾಗಿ ನಡೆಯುವ ಸಂಗತಿಗಳು ಹೋಲಿಕೆಯಾದಾಗ ಮಂತ್ರವಾದಿಯನ್ನು ಲಕ್ಷ್ಮೀ ಹಾಗೂ ಕುಟುಂಬಸ್ಥರು ನಂಬುತ್ತ ಹೋಗಿದ್ದಾರೆ. ಕೊನೆಗೆ ೧೭ ಲಕ್ಷ ಕಳೆದುಕೊಂಡಾಗಲೇ ತಾವು ವಂಚನೆ ಜಾಲಕ್ಕೆ ಸಿಲುಕಿರುವುದು ಅರಿವಾಗಿದೆ.