ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೫೦೦ ರೂಪಾ ಯಿಗೆ ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ ವನ್ನು ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊಟ್ಟ ಗ್ಯಾರಂಟಿ ಗಳನ್ನೆಲ್ಲ ಜಾರಿ ಮಾಡುವುದಾಗಿ ಭರವಸೆ ನೀಡಿದರು.
ಈಗಾಗಲೇ ಕಾಂಗ್ರೆಸ್ ನೀಡಿದ ಭರವಸೆಗಳು ಕರ್ನಾಟಕ, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಜಾರಿಯಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ಮಾಸಿಕ ೨,೫೦೦ ರೂ. ಹಣಕಾಸು ನೆರವು, ೨೫ ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ೮,೫೦೦ ರೂ. ನೀಡುವ ಯೋಜನೆಗಳನ್ನು ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿದೆ. ಇದೀಗ ಉಚಿತ ಪಡಿತರ ಹಾಗೂ ೩೦೦ ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ಈ ಗ್ಯಾರಂಟಿಗಳ ಜೊತೆಗೆ ೫೦೦ಕ್ಕೆ ಎಲ್‌ಪಿಜಿ ಸಿಲಿಂಡರ್ ಕೊಡುವ ಭರವಸೆಯನ್ನು ನೀಡಿದೆ.