ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ

ಟೋಲ್‌

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್‌ ಶುಲ್ಕ ಸಂಗ್ರಹ ಇಂದಿನಿಂದ ಪ್ರಾರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬಿಡದಿ ಸಮೀಪದ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ, ಟೋಲ್‌ ತಾಂತ್ರಿಕ ಸಮಸ್ಯೆಯಿಂದ ಸಿಬ್ಬಂದಿ ವಿರುದ್ಧ ವಾಹನ ಸವಾರರು ಗರಂ ಆಗಿದ್ದಾರೆ. ದಶಪಥ ಎಕ್ಸ್‍ಪ್ರೆಸ್‍ವೇನಲ್ಲಿ ಸರ್ವೀಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಮೂಲಭೂತ ವ್ಯವಸ್ಥೆ, ಸರ್ವೀಸ್ ರಸ್ತೆ ಸರಿಪಡಿಸಿದ ಹೆಚ್ಚಿನ ದರ ನಿಗದಿ ಮಾಡಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಮೊದಲ ದಿನವೇ ಸಾಕಷ್ಟು ತೊಂದರೆಗಳು ಎದುರಾಗಿದ್ದು, ವಾಹನಗಳಿಗೆ ಅಳವಡಿಸಿದ್ದ ಫಾಸ್ಟ್ ಟ್ಯಾಗ್‍ಗಳು ಸ್ಕ್ಯಾನ್ ಆಗುತ್ತಿರಲಿಲ್ಲ. ಇದರಿಂದಾಗಿ ಕಾರು, ಬಸ್, ಟ್ರಕ್ ಸೇರಿದಂತೆ ಇನ್ನಿತರೆ ವಾಹನ ಚಾಲಕರು ಕಿರಿಕಿರಿ ಅನುಭವಿಸುವಂತಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಶೇಷಗಿರಿಹಳ್ಳಿ ಹಾಗೂ ಕಣಮಿಣಕಿ ಟೋಲ್ ಪ್ಲಾಜ ಮುಂಭಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಪ್ಲಾಜಾಗಳಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಕೂಡಲೇ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‍ಗಳಲ್ಲಿ ಕರೆದೊಯ್ದರು.