ತೊಗರಿಗೆ ನೆಟೆ ರೋಗ, ವಿಶೇಷ ಪ್ಯಾಕೇಜ್ ಘೋಷಣೆಗೆ ಕಾಂಗ್ರೆಸ್‌ ಮುಖಂಡರ ಒತ್ತಾಯ

0
25

ಕಲಬುರಗಿ: ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಈ ಕೂಡಲೇ‌ ಕೃಷಿ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸಿ‌ ಪರಿಹಾರವಾಗಿ ವಿಶೇಷ‌ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ‌ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಈ ಸಲ ಒಟ್ಟು 4.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು. ಆದರೆ, ಜೂನ್ ತಿಂಗಳಲ್ಲಿ ಸುರಿದ ನಿರಂತರ ಮಳೆಗೆ ಕನಿಷ್ಠ 1.30 ಲಕ್ಷ ಹೆಕ್ಟೇರ್ ಹಾನಿಯಾಗಿತ್ತು. ಇದೀಗ ನೆಟೆ ರೋಗದಿಂದ 1.38 ಲಕ್ಷ ಹೆಕ್ಟೇರ್‌ ಹಾಳಾಗಿದ್ದು, ಬಿತ್ತನೆ ಪ್ರದೇಶದ ಒಟ್ಟು 70% ಹಾಳಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಈ ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆಯವತಿಯಿಂದ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.
ಆಗ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಡಿಕೆ, ತೆಂಗು ಮಾದರಿಯಲ್ಲೇ ತೊಗರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಪ್ರತಿ ಎಕರೆಗೆ 25,000 ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಹಿತ ಮರೆತಿವೆ ಎಂದ ಖರ್ಗೆ, ಸ್ವಾಮಿನಾಥನ್ ವರದಿ ಜಾರಿಗೆ ತರಲು ಸಂಪೂರ್ಣ ಮರೆತುಬಿಟ್ಟಿವೆ. ಇದರ ಪರಿಣಾಮ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಇದಕ್ಕೆ ಸರ್ಕಾರಗಳೇ ನೇರ ಹೊಣೆಯಾಗಿವೆ ಎಂದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ತಿಪ್ಪಣ್ಣಪ್ಪ‌ ಕಮಕನೂರ ಇದ್ದರು.

Previous articleನಮ್ಮ ಕ್ಲಿನಿಕ್‌ ಉತ್ತಮ ಯೋಜನೆ: ಶಾಸಕ ಬಯ್ಯಾಪುರ
Next article21 ಸಕ್ಕರೆ ಕಾರ್ಖಾನೆಗಳ ಮೇಲೆ ದಿಢೀರ್‌ ದಾಳಿ