ತಮಿಳುನಾಡಿಗೆ ನೀರು : ಸರ್ಕಾರದ ನಡೆ ಖಂಡಿಸಿ ರೈತರಿಂದ ಭಜನೆ ಚಳುವಳಿ

0
20

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಡೆ ಹಾಗೂ ಕಾವೇರಿ ಪ್ರಾಧಿಕಾರದ ‌ನಿರ್ಣಯವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತರು ಭಜನೆ ಚಳುವಳಿ ನಡೆಸಿ‌‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ‌ ಸಮಿತಿ‌ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಭಜನೆ ಚಳುವಳಿ ನಡೆಸಿದ ನೂರಾರು ರೈತರು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು.

ಆರ್ಮೋನಿಯಂ, ತಬಲ ಹಾಗೂ ಕಂಸಾಳೆ ಮೂಲಕ‌ ಸರ್ಕಾರದ ವಿರುದ್ದ ಶೋಕ ಗೀತೆಗಳನ್ನು ಹಾಡಿದ ರೈತರು, ರೈತರಿಗೆ ಮರಣದ ಭಾಗ್ಯ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನಮಗೆ ಬೇಡವೇ ಬೇಡ ಎಂದು ಹಿಡಿ ಶಾಪ ಹಾಕಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಾಧಿಕಾರದ ವಿರುದ್ದ ಗೋವಿಂದ..! ಗೋವಿಂದ..! , ತೊಲಗಲೀ ತೊಲಗಲೀ ಕಾಂಗ್ರೆಸ್ ತೊಲಗಲಿ… ಎಂಬ ಘೋಷಗಳೊಂದಿಗೆ ಆಕ್ರೋಶದ ಗೀತೆಗಳನ್ನು ಹಾಡಿದರು.

ಇದಕ್ಕೂ ಮುನ್ನ ಪಟ್ಟಣದ ಕುವೆಂಪು ವೃತ್ತದಿಂದ ತಾಲ್ಲೂಕು ಕಚೇರಿ ವರೆಗೂ ಮೆರವಣಿಗೆ ನಡೆಸಿ,‌ ಕಾವೇರಿ ನಮ್ಮದು, ಬೇಕೇ ಬೇಕು ನೀರು ಬೇಕು, ನಿಲ್ಲಿಸಿ ನಿಲ್ಲಿಸಿ ನೀರನ್ನು ನಿಲ್ಲಿಸಿ ಎಂಬಿತ್ಯಾದಿ ಘೋಷಣೆಗಳ‌ ಮೂಲಕ ಪ್ರತಿಭಟಿಸಿದರು.

Previous articleಲಘು ಯುದ್ಧ ವಿಮಾನ: ತೇಜಸ್ ಭಾರತೀಯ ವಾಯುಪಡೆಗೆ ಹಸ್ತಾಂತರ
Next articleಶಿವಮೊಗ್ಗ ಗಲಭೆ ಸರ್ಕಾರದ ಓಲೈಕೆ ರಾಜಕಾರಣದ ಫಲ