ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಆರ್.ಎಸ್ ಕನ್ನಂಬಾಡಿ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರೋ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡರು ನೇಣು ಕುಣಿಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೂ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೇಣು ಕುಣಿಕೆ ಹಿಡಿದು ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ನೀರು ಹರಿಸುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ಕುಳಿತು ಸರ್ಕಾರ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ದ ಧಿಕ್ಕಾರ ಕೂಗಿ ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಗ್ಯಾರಂಟಿ ಭಾಗ್ಯದ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ, ಇದೀಗ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ‘ನೇಣು ಭಾಗ್ಯ’ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಂಬಾಡಿ ಅಣೆಕಟ್ಟೆಯದ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸದಿದ್ದರೆ ಜಿಲ್ಲೆಯ ರೈತರ ಸಾಮೂಹಿಕ ಆತ್ಮಹತ್ಯೆಗಳಾಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಶಾಸಕರುಗಳು ರೈತರ ಪರ ನಿಲ್ಲಬೇಕಿದ್ದು, ಇದೇ ರೀತಿ ರೈತರ ಬಗ್ಗೆ ಅಸಡ್ಡೆ ತೋರಿದ್ದೇ ಆದಲ್ಲಿ ನೀವೆಲ್ಲೇ ಸಿಕ್ಕರೂ ನಿಮ್ಮನ್ನು ತಡೆದು ನಿಮ್ಮ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು