ಜಾಗೆ ವಿವಾದ ಕೊಲೆಯಲ್ಲಿ ಅಂತ್ಯ

0
23

ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಗ್ರಾಮದ ಪರಸಪ್ಪ ಸಕ್ರೆಪ್ಪ ಹಾದಿಮನಿ(56) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಪಕ್ಕದ ಮನೆಯ ದ್ಯಾಮಪ್ಪ ಕಾಳಪ್ಪ ಬಡಿಗೇರ ಎಂಬಾತನೇ ಕೊಲೆ ಮಾಡಿರುವುದು.
ಪರಸಪ್ಪ ಮತ್ತು ದ್ಯಾಮಪ್ಪ ಅವರದ್ದು ಅಕ್ಕಪಕ್ಕದಲ್ಲಿಯೇ ಮನೆ ಇದ್ದು, ಇಬ್ಬರ ಮಧ್ಯೆ ಜಾಗೆ ವಿವಾದಕ್ಕೆ ವಾಗ್ವಾದ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು, ದ್ಯಾಮಪ್ಪ ಪರಸಪ್ಪ ಹಾದಿಮನಿಯನ್ನು ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಪರಸಪ್ಪನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಪರಸಪ್ಪ ಮೃತಪಟ್ಟಿದ್ದಾನೆ.
ಘಟನೆಯಾದ ತಕ್ಷಣ ದ್ಯಾಮಪ್ಪ ಬಡಿಗೇರ ಪರಾರಿಯಾಗಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ಇಬ್ಬರ ಮಧ್ಯೆ ಗೋಡೆ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದು, ತನಿಖೆ ಕೈಗೊಂಡಿದೆ. ಶೀಘ್ರವೇ ದ್ಯಾಮಣ್ಣನನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ತಿಳಿಸಿದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡರೆ ಉತ್ತಮ: ಶೆಟ್ಟರ್
Next articleದೆಹಲಿ ನಾಯಕರ ಮೇಲೆ ಸಿದ್ದರಾಮಯ್ಯ ಅವರಿಗೆ ವಿಶ್ವಾಸ ಇಲ್ಲ