ರಾಯಚೂರು: ಸಿಇಟಿ ಪರೀಕ್ಷೆಗೆ ತೆರಳಿದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವ ಪ್ರಕರಣವು ಖಂಡನಾರ್ಹವಾಗಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಕಟಣೆ ನೀಡಿರುವ ಶ್ರೀಪಾದಂಗಳವರು ಶಿವಮೊಗ್ಗ, ಬೀದರ್ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿರುವ ವೇಳೆಯಲ್ಲಿ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಂದ ಧರ್ಮದ ಸಂಕೇತ, ಸಂಪ್ರದಾಯದ ಸಂಕೇತವಾಗಿರುವ ಯಜ್ಞೋಪವಿತ (ಜನಿವಾರ)ವನ್ನು ಕಿತ್ತು ಎಸೆದರೆ ಮಾತ್ರ ಒಳಗಡೆ ಪ್ರವೇಶ ನೀಡುತ್ತೇವೆ ಎಂದು ಒಂದು ಕಡೆ, ಮತ್ತೊಂದು ಕಡೆ ಜನಿವಾರವನ್ನು ಕತ್ತರಿಸಿ ಡೆಸ್ಟ್ ಬಿನ್‌ನಲ್ಲಿ ಹಾಕಿರುವಂತಹ ಘಟನೆ ಖಂಡನೀಯ. ಇಂಥ ಘಟನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಪವಿತ್ರ ಸಂವಿಧಾನದಲ್ಲಿ ಧರ್ಮದ ಆಚರಣೆ ಸ್ವಾತಂತ್ರ‍್ಯದಡಿಯಲ್ಲಿ ಅವರವರು ಧರ್ಮವನ್ನು ಆಚರಿಸಲು ಸಂವಿಧಾನದತ್ತವಾದ ಅಧಿಕಾರಿ, ಅವಕಾಶ ಕಲ್ಪಿಸಲಾಗಿದೆ. ಆದರೆ, ಒಂದು ಕಡೆ ಸಂವಿಧಾನದ ಬಗ್ಗೆ ಮಾತನಾಡುವುದು ಮತ್ತೊಂದು ಕಡೆ ಧರ್ಮ ಸ್ವಾತಂತ್ರ‍್ಯವನ್ನು ಹರಣ ಮಾಡುವಂಥ ಕೃತ್ಯಗಳಿಗೆ ಆಸ್ಪದ ನೀಡುವುದು ನಡೆಯುತ್ತಿದೆ ಎಂದರು.