ಚಂದಪ್ಪ ನಿನ್ ನಾಲ್ಕ್ ಉಧೋ-ಉಧೋ…

ಆಂಧ್ರದ ಕುರಿಗಡ್ಡದ ಚಂದಪ್ಪನಿಗೆ ಹೀಗಂತ ಅನ್ನಲೇಬೇಕಾಗಿದೆ. ಎಂತಹ ಮನುಷ್ಯ ಏನುಕತೆ…ಆತನನ್ನು ಅರ್ಥಮಾಡಿಕೊಂಡ ಜನರು ತೀರ ಕಮ್ಮಿ ಎಂದು ತಿಗಡೇಸಿ ಆಂಧ್ರದ ನಾಯ್ಡು ಚಂದಪ್ಪನನ್ನು ಭಯಂಕರ ಹೊಗಳಿದ. ಇದ್ದರೆ ಅಂತಹ ಮನುಷ್ಯ ಇರಬೇಕು ಇಲ್ಲದಿದ್ದರೆ ಇರಲೇಬಾರದು. ನನಗಂತೂ ಆತನ ಬಗ್ಗೆ ಬಹಳ ಹೆಮ್ಮೆ ಇದೆ ಎಂದು ಹೇಳುತ್ತಿದ್ದ. ನೆರೆದ ಗೆಳೆಯರ ಬಳಗ ಆಶ್ಚರ್ಯಚಿಕಿತರಾದರು. ಈ ತಿಗಡೇಸಿ ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಬಯ್ದುಕೊಂಡು ತಿರುಗಾಡುತ್ತಾನೆ ಅಂಥದ್ದರಲ್ಲಿ ಚಂದಪ್ಪನನ್ನು ಹೊಗಳುತ್ತಿದ್ದಾನೆ ಎಂದರೆ ಅದರಲ್ಲಿ ಏನೋ ಇರುತ್ತದೆ ಎಂದು ಅಂದುಕೊಂಡರು. ಕಿವುಡನುಮಿಯನ್ನು ಕೇಳಿದರಾಯಿತು ಎಂದು ಆಕೆಯನ್ನು ಕೇಳಿದಾಗ… ಅಯ್ಯೋ ಚಂದಪ್ಪ ಏನಿಲ್ಲ ನಿಮಗೆ ಹೆಲ್ಪ್ ಮಾಡುತ್ತೇನೆ ಎಂದು ಹೇಳಿದ್ದಾರೆ ಅದಕ್ಕೆ ಹಾಗೆ ಅಂತಿದಾನೆ ಎಂದು ಹೇಳಿದಳು. ಬಹಳಷ್ಟು ಜನ ಏನೇನೋ ಹೇಳಿದರು. ಕೊನೆಗೆ ಆತನನ್ನೇ ಕೇಳಿದರಾಯಿತು ಎಂದು ಸಂಕಲ್ಪ ಮಾಡಿಕೊಂಡರು. ಧೈರ್ಯ ಮಾಡಿ ಯಾಕೆ ತಿಗಡೇಸಿ ಚಂದಪ್ಪನನ್ನು ಬಹಳ ಹೊಗಳುತ್ತಿದ್ದಿಯ ಕಾರಣವಾದರೂ ತಿಳಿಸು ಅಂದಾಗ…. ಅಲ್ಲಿಯೇ ಇದ್ದ ನೀರನ್ನು ಗಟಗಟ ಕುಡಿದು ಸ್ವಲ್ಪ ಕೆಮ್ಮಿ…. ನೋಡ್ರಪಾ ಈ ದಕ್ಷಿಣ ಭಾಗದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಏನರ ಗುದ್ದಾಟ ಆಯುತು ಅಂದರೆ ನಾವು ಅಲ್ಲಿಯವರನ್ನು ರ‍್ರೋ… ಬನ್ರೋ ಎಂದು ಕರೆಯಬೇಕಾದ ಪ್ರಸಂಗ ಬಂದಿದೆ. ಇದನ್ನು ಅರ್ಥ ಮಾಡಿಕೊಂಡ ಚಂದಪ್ಪ ಎಲ್ಲರನ್ನೂ ಕರೆಯಿಸಿ ಒಂದಲ್ಲ ಎರಡಲ್ಲ… ಮೂರು ಬೇಕಾದರೆ ನಾಲ್ಕು ಮಕ್ಕಳನ್ನು ಮಾಡಿ ಅಂದಿದ್ದಾರೆ. ನಮ್ಮವರು ಯಾವಾಗಾದರೂ ಹೀಗೆ ಹೇಳಿದರಾ? ಏನಾಗಿದೆ ಇವರಿಗೆ ಧಾಡಿ? ಅದಕ್ಕೆ ನೀವೆಲ್ಲ ರೆಡಿಯಾಗಿ ಚಂದಪ್ಪ ಗೆಳೆಯರ ಬಳಗ ಎಂದು ಸಂಘ ಕಟ್ಟಿ ನಾವೂ ಹಳ್ಳಿ ಹಳ್ಳಿ ಅಡ್ಡಾಡಿ ನೋಡ್ರಪಾ ಹಿಂಗಿಂಗೆ ಅಂತ ಹೇಳೋಣ…ಅವರನ್ನು ಹೇಗಾದರೂ ಮಾಡಿ ಒಪ್ಪಿಸೋಣ… ಕನ್ಯಾಗಳಿಗೆ ಮೊದಲೇ ಕಂಡೀಷನ್ ಹಾಕುವಂತಹ ಕಾನೂನು ತರುವಂತೆ ಸರ್ಕಾರಕ್ಕೆ ಆಗ್ರಹ ಮಾಡೋಣ ಏನಂತೀರಿ? ಎಂದು ಕೇಳಿದ. ಎಲ್ಲರೂ ಮುಖ ಮುಖ ನೋಡಿಕೊಂಡು ಒಮ್ಮೆಲೇ ಚಂದಪ್ಪ ನಿನ್ ನಾಲ್ಕು ಉಧೋ… ಉಧೋ ಎಂದು ಒಂಥರಾ ದನಿಯಲ್ಲಿ ಹಾಡಿದರು.