ಮಂಗಳೂರು: ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿದೆ. ಸರಕಾರ ರಚನೆಯಾಗಿ ೨೪ ಗಂಟೆ ಅವಧಿ ನೀಡಿ ಐದು ಉಚಿತ ಗ್ಯಾರಂಟಿಯನ್ನು ಸರ್ಕಾರ ಘೋಷಿಸಿತ್ತು. ಕಾಂಗ್ರೆಸ್ ತಿಂಗಳೊಳಗೆ ಗ್ಯಾರೆಂಟಿ ಜಾರಿಗೆ ತರದಿದ್ದೆ ಜುಲೈನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಎಚ್ಚರಿಸಿದ್ದಾರೆ.
ನಗರದಲ್ಲಿ ಇಂದು ದ.ಕ. ಜಿಲ್ಲೆಯ ಏಳು ಮಂದಿ ಬಿಜೆಪಿ ಶಾಸಕರ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆ ನೀಡಿದ ಪಂಚ ಗ್ಯಾರೆಂಟಿ ಅನುಷ್ಠಾನವಾಗದೆ ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ ಸಿಗುತ್ತಾ ಇದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ವಿದ್ಯುತ್ ಬಿಲ್ ಪಾವತಿಗೆ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಸ್ ನಿರ್ವಾಹಕರ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಉಚಿತ ಯೋಜನೆಗಳನ್ನು ಕೊಡುವಲ್ಲಿ ವಿಫಲ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ, ಗಲಾಟೆಗಳು ಜಾಸ್ತಿಯಾಗುತ್ತಿದ್ದು, ಬಿಜೆಪಿ ಶಾಸಕರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ದ್ವೇಷ ರಾಜಕಾರಣ ಮುಂದುವರಿಸಿದರೆ ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಬಿಜೆಪಿ ಹೋರಾಟ ನಡೆಸಲಿದೆ ಎಂದರು.