ಗ್ಯಾರಂಟಿ ಯೋಜನೆ ಜಾರಿಗೆ ಹಣ ಎಲ್ಲಿಂದ ತರ್ತಾರೆ? ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ

0
14

ಹುಬ್ಬಳ್ಳಿ : ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನುಡಿದಂತೆ ತಕ್ಷಣ ಜಾರಿಗೊಳಿಸಬೇಕು. ಈ ಯೋಜನೆಗೆ ಯಾವ ರೀತಿ ಹಣಕಾಸು ಹೊಂದಿಸಲಾಗುತ್ತದೆ ಎಂಬುದರ ಬಗ್ಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅವುಗಳನ್ನು ಜಾರಿ ಮಾಡಲಾಗದೇ ಜನರಿಗೆ ಮೋಸ ಮಾಡುತ್ತಿದೆ. ಪದವೀಧರ, ಡಿಪ್ಲೋಮಾ ಕೋರ್ಸ್ ಮಾಡಿದವರಿಗೆ ನಿರುದ್ಯೋಗ ಭತ್ಯೆ ಗ್ಯಾರಂಟಿ ಜಾರಿ ಮಾಡಲಾಗಿಲ್ಲ. ಗೃಹ ಲಕ್ಷ್ಮೀ ಜಾರಿ ಮಾಡಿಲ್ಲ. ಗೃಹ ಜ್ಯೋತಿಗೆ ಇಪ್ಪತ್ತೆಂಟು ಕಂಡೀಶನ್ಸ್ ಹಾಕಿದ್ದಾರೆ. ಹಣ ಇಲ್ಲದೇ ಯೋಜನೆ ಜಾರಿ ಮಾಡಲಾಗದೇ ಕಾಂಗ್ರೆಸ್ ಸರ್ಕಾರ ಪರದಾಡುತ್ತಿದೆ. ಎಲ್ಲವೂ ಸರಿಯಾಗಿದೆ. ಹಣಕಾಸಿನ ಸಮಸ್ಯೆ ಇಲ್ಲವೇ ಇಲ್ಲ ಎಂಬುದಾದರೆ ಶ್ವೇತಪತ್ರ ಹೊರಡಿಸಿ ರಾಜ್ಯದ ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದರು.
ಉಚಿತ ವಿದ್ಯುತ್ ಕೊಡುವುದಿರಲಿ. ಕೊಡುವ ವಿದ್ಯುತ್ ಗೂ ದರ ಹೆಚ್ಚಳ ಮಾಡಿದೆ. ಕೂಡಲೇ ದರ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆಯಬೇಕು. ಕೆಇಆರ್ ಸಿ ಶಿಫಾರಸ್ಸು ಮಾಡಿರಬಹುದು. ಆದರೆ, ರಾಜ್ಯ ಸರ್ಕಾರ ಅದನ್ನು ಅನುಸರಿಸಬೇಕು ಎಂದೇನಿಲ್ಲ. ವಿಧೇಯಕ ತಂದು ದರ ಹೆಚ್ಚಳ ಪ್ರಸ್ತಾವನೆ ಕೈ ಬಿಡಲು ಅವಕಾಶವಿದೆ. ನಾನೂ ಇಂಧನ ಸಚಿವನಾಗಿದ್ದವ. ಮನಸ್ಸು ಮಾಡಿದರೆ ರಾಜ್ಯ ಸರ್ಕಾರ ಇದನ್ನು ಮಾಡಬಹುದು ಎಂದು ಹೇಳಿದರು.
ಯಾವುದೇ ಲೆಕ್ಕಾಚಾರ ಮಾಡದೇ ಕಾಂಗ್ರೆಸ್ ನಾಯಕರು ಉಮೇದಿಯಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದರು. ಈಗ ಜಾರಿಗೊಳಿಸದೇ ದಿನಕ್ಕೊಂದು ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ಯಾರಂಟಿ ಯೋಜನೆ ಜಾರಿ ಮಾಡದೇ ಕಾಂಗ್ರೆಸ್ ಸರ್ಕಾರ ನುಣುಚಿಕೊಳ್ಳಲು ನಾವು ಬಿಡಲ್ಲ. ನಮ್ಮ ಪಕ್ಷ ರಾಜ್ಯವ್ಯಾಪಿ ಹೋರಾಟ ನಡೆಸುವ ಮುನ್ನ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಬಗ್ಗರ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ವಿಧಾನ ಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಮಾಡಲು, ಕಾರ್ಯಕರ್ತರು, ಮುಖಂಡರಲ್ಲಿ ಚೈತನ್ಯ ತುಂಬಲು 7 ತಂಡಗಳಾಗಿ ಪಕ್ಷದ ಮುಖಂಡರು ಪ್ರವಾಸ ಮಾಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾಲ್ಕು ಗೋಡೆ ಮಧ್ಯ ಮಾತಾಡಿದ್ದು ಹೊರಗಡೆ ಬರಬಾರದು ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು, ಇನ್ನೊಂದು ಮತ್ತೊಂದು ಯಾವುದು ಹೊರಗಡೆ ಬರಬಾರದು. ಯಾರೂ ಈ ರೀತಿ ಹೇಳಿಕೆ ನೀಡುತ್ತಿದ್ದಾರೊ ಅವರಿಗೂ ನಾನು ವಿನಂತಿ ಮಾಡಿದ್ದೇನೆ ಎಂದು ಈಚೆಗೆ ಸಂಸದ ಪ್ರತಾಪಸಿಂಹ ನೀಡಿದ ಹೇಳಿಕೆ ಕುರಿತಂತೆ ಈಶ್ವರಪ್ಪ ಪ್ರತಿಕ್ರಿಯಿಸಿದರು. ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಈ ಬಗ್ಗೆ ಪಕ್ಷದ ರಾಜ್ಯ ಅಧ್ಯಕ್ಷರಿಗೂ ಈ ವಿಷಯ ಗಮನಕ್ಕೆ ತಂದಿದ್ದೇನೆ ಎಂದು ಈಶ್ವರಪ್ಪ ಹೇಳಿದರು. ದುರ್ದವೈದ ಸಂಗತಿ. ಕಾಂಗ್ರೆಸ್‌ನವರ ಸಹವಾಸದಿಂದ ನಮ್ಮಲ್ಲೂ ಶಿಸ್ತು ಅಲ್ಪ ಸ್ವಲ್ಪ ಕಡಿಮೆಯಾಗಿದೆ. ಕಾಂಗ್ರೆಸ್‌ನಲ್ಲಿ ಇದ್ದವರು ನಮ್ಮಲ್ಲಿ ಕರೆದುಕೊಂಡಿದ್ದೇವಲ್ಲ. ಆ ಸಹವಾಸ ದೋಷದಿಂದ ಶಿಸ್ತು ಕಡಿಮೆ ಆಗಿದೆ ಎನಿಸುತ್ತದೆ ಎಂದರು.

Previous articleಎರಡುವರೆ ವರ್ಷ ಕಾಂಗ್ರೆಸ್ ಹೆಡ್ ಲೆಸ್ ಆಗಿತ್ತು
Next articleಬೆಳಗಾವಿಗೆ ವಂದೇ ಭಾರತ ರೈಲು ತರಲು ಸಿಡಿದೆದ್ದ ಕರವೇ….!!