ಕರಿಲಕ್ಷುಂಪತಿ ಹೇಳಿದ ಭವಿಷ್ಯ ಕೊನೆಗೂ ನಿಜವಾಯಿತು. ಅವತ್ತು ಬೇಜಾರಾದ ಯಜಮಾನರು ಏನಿದೆಲ್ಲ ಎಂದು ಖಣಿ ಕೇಳಲು ಕರಿಲಕ್ಷುಂಪತಿ ಕಡೆ ಹೋದಾಗ ಅವನು..ಎಡರಟ್ಟೆಗೆ ತಾಯತ ಕಟ್ಟಿ ಇನ್ನು ನೀನು ಚಿಂತೆ ಮಾಡಬೇಡ. ನಿನ್ನ ಕೆಳಗೆ ಹಣ ಝಣಝಣ ಎಂದು ಮಾರ್ಮಿಕವಾಗಿ ನುಡಿದಿದ್ದ. ಅವತ್ತಿನಿಂದ ಆ ಯಜಮಾನರು ಕೆಳಗಡೆ ಮುಖಮಾಡಿ ನಡೆಯುತ್ತಿದ್ದರು. ಒಂದು ಬಾರಿ ಬಸ್‌ಸ್ಟ್ಯಾಂಡಿನಲ್ಲಿ ಕೆಳಗೆ ನೋಡಬೇಕಾದರೆ ಒಂದು ರೂ ಸಿಕ್ಕಿತ್ತು. ಈ ಒಂದು ರೂಪಾಯಿ ಸಲುವಾಗಿ ಕರಿಲಕ್ಷುಂಪತಿ ಇಷ್ಟೆಲ್ಲ ಹೇಳಿದನಾ? ಎಂದು ವಿಚಾರ ಮಾಡಿದ. ಇದೇ ವಿಷಯವಾಗಿ ಕ.ಲ. ಗೆ ಕಾಲ್ ಮಾಡಿ ಹೇಳಿದ..ಸಣ್ಣದರಿಂದ ದೊಡ್ಡದೇ ಹೊರತು ದೊಡ್ಡದರಿಂದ ಸಣ್ಣದಲ್ಲ ಎಂದು ಮಾರ್ಮಿಕವಾಗಿ ಹೇಳಿದ. ಅಷ್ಟಕ್ಕೆ ಖುಷಿಯಾದ ಯಜಮಾನರು ಇವತ್ತಿಲ್ಲ ನಾಳೆ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ. ಆತನ ಗೆಳೆಯರೆಲ್ಲ ಕೆಳಮಾರಿ ಯಜಮಾನ ಎಂದು ಕರೆಯತೊಡಗಿದರು. ಕರಿಲಕ್ಷುಂಪತಿ ಹೀಗೆ ಹೇಳಿ ನನಗೆ ಗೆಳೆಯರ ಜತೆ ಗೇಲಿ ಮಾಡಿಸಿಕೊಳ್ಳುವ ಹಾಗೆ ಮಾಡಿದ ಎಂದು ಮರಗುತ್ತಿದ್ದ. ಆದರೂ ಇವತ್ತಿಲ್ಲ ನಾಳೆ ಟೈಮ್ ಬರುತ್ತದೆ ಎಂದು ಕಾಯುತ್ತಿದ್ದ. ಕಾಲಘಟ್ಟ ಉರುಳಿ ಉರುಳಿ ಅದು ಎಲ್ಲೆಲ್ಲೋ ಹೋಯಿತು. ಯಜಮಾನರು ಏನೇನೋ ಆದರು ಭಯಂಕರ ಫೇಮಸ್ಸೂ ಆದರು. ಎಲ್ಲರೂ ಅವರನ್ನು ದೊಡ್ಮನುಷ್ಯ ಎಂದು ಕರೆಯುತ್ತಿದ್ದರು. ಯಜಮಾನರಿಗೆ ಬೇಕಾದವರು ಬಾವಿಯಲ್ಲಿನ ನೀರು ಸ್ನಾನ ಮಾಡಿ ಒದ್ದೆಬಟ್ಟೆಯಲ್ಲಿ ದೇವಸ್ಥಾನಗಳಿಗೆ ಉರುಳು ಸೇವೆ ಮಾಡಿದರು. ಅದ್ಯಾವ ದೇವರು ತಥಾಸ್ತು ಅಂದರೋ ಏನೋ ಕೊನೆಗೆ ಯಜಮಾನರು ಅವತ್ತು ಹೋಗಿ ಕುರ್ಚಿಮೇಲೆ ಕುಳಿತರು. ಚರಕ್ ಚರಕ್ ಅಂದ ಹಾಗೆ ಆಗಿ ಏನಿದು ಎಂದು ಕೆಳಗೆ ನೋಡಿದರು. ಅಲ್ಲಿ ಗರಿಗರಿ ನೋಟು…ಝಣ ಝಣ ಹಣ. ಓಹೋ ಕರಿಲಕ್ಷುಂಪತಿ ಹೇಳಿದ್ದು ನಿಜವಾಯಿತು ಎಂದು ಅಂದುಕೊಂಡ. ಸಾಹೇಬರು ಮಾತ್ರ ಎಲ್ಲಿಂದ ಬಂತು ರೊಕ್ಕ…ಎಲ್ಲಿಂದ ಬಂತು ರೊಕ್ಕ ಅಂದಾಗ ಕಕ್ಕಾಬಿಕ್ಕಿಯಾದ ಅವರು ನಂಗೊತ್ತಿಲ್ಲ..ನಂಗೊತ್ತಿಲ್ಲ ಅನ್ನುತ್ತಿದ್ದಾರೆ.