ಇಂದಿರಾ ಹತ್ಯೆಯ ಕಾಲದಲ್ಲಿ ತಲೆ ಎತ್ತಿದ ಖಾಲಿಸ್ತಾನ ಪ್ರತ್ಯೇಕತಾವಾದ ಈಗ ವಿದೇಶಗಳಲ್ಲಿ ಬೇರೂರುತ್ತಿದೆ. ಇದು ದೇಶದ ಸುರಕ್ಷತೆಗೆ ಎಂದಿದ್ದರೂ ಗಂಡಾಂತರಕಾರಿ. ಯುಕೆದಲ್ಲಿ ಇಂದಿರಾ ಹತ್ಯೆಯ ಸ್ತಬ್ಧ ಚಿತ್ರದ ಮೆರವಣಿಗೆ ನಡೆದಿದೆ. ಇದರ ಬಗ್ಗೆ ಅಲ್ಲಿಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲಿಯ ರಾಜಕೀಯ ಬೆಳವಣಿಗೆಯಲ್ಲಿ ಸಿಖ್ ಸಮುದಾಯದವರು ಪ್ರಮುಖ ಪಾತ್ರವಹಿಸುವಷ್ಟು ಬೆಳೆದಿದ್ದಾರೆ. ಈಗ ಅವರು ಓಟ್ ಬ್ಯಾಂಕ್ ಆಗಿದ್ದಾರೆ. ಅವರ ಬಳಿ ಸಾಕಷ್ಟು ಹಣ ಇದೆ. ಇವರು ಸುಶಿಕ್ಷತರು. ವ್ಯಾಪಾರ- ವ್ಯವಹಾರದಲ್ಲಿ ಮುಂದಿದ್ದಾರೆ. ಅಲ್ಲಿಯ ಜನ ಇವರನ್ನು ಎದುರುಹಾಕಿಕೊಳ್ಳಲು ಇಚ್ಛಿಸುತ್ತಿಲ್ಲ. ಭಾರತ ಇದರ ಬಗ್ಗೆ ಪ್ರತಿಭಟಿಸಿದಾಗ ಅಲ್ಲಿಯ ರಾಜಕೀಯ ಪ್ರಮುಖರು ವಿರೋಧಿಸುವ ಹೇಳಿಕೆ ನೀಡಿ ನಂತರ ಮೌನವಹಿಸುತ್ತಾರೆ. ಖಾಲಿಸ್ತಾನ್ಗೆ ಪರೋಕ್ಷವಾಗಿ ಅಲ್ಲಿಯ ಜನರ ಬೆಂಬಲ ಸಿಗುತ್ತಿದೆ. ೧೯೮೨ ರಲ್ಲಿ ಇಂದಿರಾಗಾಂಧಿ ಸ್ವರ್ಣ ಮಂದಿರಕ್ಕೆ ಸೇನೆ ನುಗ್ಗುವಂತೆ ಮಾಡಿ ಬಿಂದ್ರಲ್ವಾಲೆ ವಿರುದ್ಧ ಕಾರ್ಯಾಚರಣೆ ನಡೆಸಿದರು. ಅದರ ಫಲವಾಗಿ ೧೯೮೪ ರಲ್ಲಿ ಇಂದಿರಾ ಹತ್ಯೆಯಾಯಿತು. ದೆಹಲಿಯಲ್ಲಿ ಸಿಖ್ಖರ ಹತ್ಯಾಕಾಂಡವೇ ನಡೆದುಹೋಯಿತು. ಇದು ಅಲ್ಲಿಗೆ ನಿಲ್ಲಲಿಲ್ಲ. ಪ್ರತ್ಯೇಕ ದೇಶಕ್ಕಾಗಿ ಸಶಸ್ತ್ರ ಹೋರಾಟ ನಡೆಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ.
ಇಂದಿರಾ ಹತ್ಯೆಯ ನಂತರ ಅವರ ಹೋರಾಟ ನಿಂತಿಲ್ಲ. ಅದು ಈಗ ಮೋದಿ ವಿರುದ್ಧವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಜನಪರ ಹೋರಾಟದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕಳೆದ ವರ್ಷ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಡೆಯಿತು. ಅದನ್ನು ಬಳಸಿಕೊಂಡು ಕೆಂಪುಕೋಟೆಯ ಮೇಲೆ ಖಾಲಿಸ್ತಾನ ಧ್ವಜ ಹಾರಿಸುವ ಪ್ರಯತ್ನ ನಡೆಯಿತು. ಅದೇರೀತಿ ಇತ್ತೀಚೆಗೆ ನಡೆದ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯಲ್ಲೂ ಇದರ ಹಸ್ತಕ್ಷೇಪ ಇರುವುದು ಕಂಡು ಬಂದಿದೆ. ಹೀಗಾಗಿ ದೇಶದ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿರುವುದಂತೂ ನಿಜ. ಪಂಜಾಬ್ನಲ್ಲಿ ಹಿಂದೆ ಕ್ಯಾ.ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲಿ ಪಾಕ್ ಶಕ್ತಿಗಳು ತಲೆಹಾಕದಂತೆ ಕ್ರಮ ಕೈಗೊಂಡಿದ್ದರು. ನವಜೋತ್ ಸಿಂಗ್ ಸಿದ್ದು ಮಧ್ಯದಲ್ಲಿ ತಲೆಹಾಕಿ ಖಾಲಿಸ್ತಾನ್ ಶಕ್ತಿಗಳು ಮತ್ತೆ ಚುರುಕುಗೊಳ್ಳಲು ಕಾರಣರಾದರು. ಈಗ ಆಮ್ ಆದ್ಮಿ ಪಾರ್ಟಿ ಆಡಳಿತದಲ್ಲಿದೆ. ಬಿಂದ್ರನ್ ವಾಲೆ ಸ್ಥಾನಕ್ಕೆ ಈಗ ಬಂದಿರುವುದು ಅಮೃತ್ಪಾಲ್ ಸಿಂಗ್, ಈತನನ್ನು ನಿಯಂತ್ರಿಸಲು ಪಂಜಾಬ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಯುಕೆ, ಕೆನಡಾ, ಆಸ್ಟ್ರೇಲಿಯಾ, ಅಮೆರಿಕದಲ್ಲಿ ಈಗ ಖಾಲಿಸ್ತಾನಿಗಳಿಗೆ ಆಶ್ರಯ ಸಿಗುತ್ತಿದೆ. ಇದರ ವಿರುದ್ಧ ಬೇಕಾದಷ್ಟು ಸಂಗತಿಗಳು ಬಹಿರಂಗಗೊಂಡಿದ್ದರೂ ಆ ದೇಶಗಳು ಕ್ರಮ ಕೈಗೊಂಡಿಲ್ಲ. ಭಾರತವನ್ನು ದುರ್ಬಲಗೊಳಿಸುವ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯರು ಯೋಚಿಸಬೇಕಾದ ಕಾಲ ಬಂದಿದೆ. ಹಣ ಸಂಪಾದನೆಗಾಗಿ ವಿದೇಶಗಳಲ್ಲಿರುವ ಭಾರತೀಯರು ದೇಶಪ್ರೇಮವನ್ನು ಕಳೆದುಕೊಳ್ಳಬೇಕಾದ ಅಗತ್ಯವಿಲ್ಲ. ಹೊರದೇಶದಲ್ಲಿದ್ದರೂ ಭಾರತದ ಪರ ನಿಲ್ಲುವುದು ಅಗತ್ಯ. ಬಿಂದ್ರಲ್ ವಾಲೆ ಹೋದ ಮೇಲೆ ಇದು ಸಹಜ ಸಾವನ್ನು ಕಾಣುತ್ತದೆ ಎಂದು ಭಾವಿಸಲಾಗಿತ್ತು. ಅದರೆ ಅದು ಚಿಗುರೊಡೆಯುತ್ತಿದೆ. ಹೊಸಬರು ದೇಶವಿರೋಧಿ ಕೃತ್ಯಗಳಲ್ಲಿ ಕೈಜೋಡಿಸುತ್ತಿದ್ದಾರೆ. ಪಂಜಾಬ್ನಲ್ಲಿ ಇದಕ್ಕೆ ಜನರ ಬೆಂಬಲ ಹೆಚ್ಚು ಸಿಕ್ಕಿಲ್ಲ. ಆದರೆ ಹೊರಗೆ ಇರುವವರು ಹಣ ಮತ್ತು ನೈತಿಕ ಬೆಂಬಲ ನೀಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರಕ್ಕಿಂತ ಸಮಾಜ ಬಹಿರಂಗ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿರುವ ಸಿಖ್ ಸಮುದಾಯ ಬಹಿರಂಗವಾಗಿ ಇದಕ್ಕೆ ತಮ್ಮ ಬೆಂಬಲ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಎಲ್ಲ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಖಾಲಿಸ್ತಾನ್ಗೆ ನಮ್ಮ ಬೆಂಬಲ ಇಲ್ಲ ಎಂದು ಘೋಷಿಸಬೇಕು. ಚುನಾವಣೆ ಕಾಲದಲ್ಲಿ ಇವರ ಬೆಂಬಲವನ್ನು ಪರೋಕ್ಷವಾಗಿ ಪಡೆಯಬಾರದು. ಬಿಜೆಪಿ ವಿರುದ್ಧ ಕಾಂಗ್ರೆಸ್, ಕಾಂಗ್ರೆಸ್ ವಿರುದ್ಧ ಬಿಜೆಪಿ ಈ ಶಕ್ತಿಗಳನ್ನು ಬಳಸಿಕೊಳ್ಳುವುದನ್ನು ಕೈಬಿಡಬೇಕು. ದೇಶ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವುದೂ ದೇಶದ್ರೋಹದ ಕೆಲಸ. ಈ ವಿಷಯದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗುವುದು ಸರಿಯಲ್ಲ. ಜನ ಮತ್ತು ರಾಜಕೀಯ ಪಕ್ಷಗಳು ಬಹಿರಂಗವಾಗಿ ಇವುಗಳನ್ನು ದೂರವಿಟ್ಟಲ್ಲಿ ಹೊರಗಿನ ಶಕ್ತಿಗಳ ಕೈವಾಡ ನಡೆಯುವುದಿಲ್ಲ.
ಕೆನಡಾ ಮೊದಲಿನಿಂದಲೂ ಭಾರತದ ವಿರುದ್ಧ ಇಂಥ ಕೆಲಸ ಮಾಡುತ್ತ ಬಂದಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕ ಉತ್ತರ ನೀಡುವುದು ಅಗತ್ಯ. ಕೇಂದ್ರದ ವಿದೇಶಾಂಗ ಸಚಿವರು ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ. ಇದರ ಪರಿಣಾಮ ಈಗಾಗಲೇ ಕಂಡು ಬರುತ್ತಿದೆ. ರಷ್ಯಾ, ಇರಾನ್ ನೊಂದಿಗೆ ಭಾರತವನ್ನೂ ಕೆನಡಾ ಸೇರಿಸಿದೆ. ಇದೇ ಇರಲಿ ದೇಶದ ರಕ್ಷಣೆ ವಿಷಯ ಬಂದಾಗ ಯಾವುದೇ ರೀತಿಯ ರಿಯಾಯಿತಿ ತೋರಿಸಲು ಸಾಧ್ಯವೇ ಇಲ್ಲ. ಸಿಖ್ ಸಮುದಾಯ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅದರಿಂದ ಇಲ್ಲಿ ನಮ್ಮೊಂದಿಗೆ ಇರುವ ಸಿಖ್ ಸಮುದಾಯವನ್ನು ಸಂಶಯದಿಂದ ನೋಡುವುದು ಸರಿಯಲ್ಲ. ಕೆಲವೇ ಜನ ಖಾಲಿಸ್ತಾನ್ ನಂಬಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡಬೇಕು. ಈ ವಿಷಯದಲ್ಲಿ ಎಲ್ಲ ಪ್ರತಿಪಕ್ಷಗಳು ಸರ್ಕಾರದ ಕ್ರಮಕ್ಕೆ ಮುಕ್ತ ಬೆಂಬಲ ನೀಡುವುದು ಅಗತ್ಯ.