ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಮೂವರ ಸೆರೆ

0
34

ಭಾಗಶ: ನಗ, ನಗದು ವಶ

ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ. ಸಿ. ರೋಡ್ ಶಾಖೆಯಲ್ಲಿ ಜ.೧೭ರಂದು ನಡೆದ ಭಾರೀ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜ್ಯದ ಅತಿದೊಡ್ಡ ದರೋಡೆ ಪ್ರಕರಣ ಭೇದಿಸಲು ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಪದ್ಮನೇರಿ ಅಮ್ಮನ್‌ಕೋವಿಲ್‌ನ ಮುರುಗಂಡಿ ತೇವರ್ (೩೬), ಮುಂಬೈ ದೊಂಬಿವಿಲಿ ಪಶ್ಚಿಮದ ಯೊಸುವ ರಾಜೇಂದ್ರನ್ (೩೫), ಮುಂಬೈ ತಿಲಕ ನಗರ ಚೆಂಬೂರಿನ ಕಣ್ಣನ್ ಮಣಿ (೩೬) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಾರು, ಮೂರು ಸಜೀವ ಗುಂಡುಗಳ ಸಹಿತ ಎರಡು ಪಿಸ್ತೂಲ್, ತಲವಾರು, ಚೂರಿ, ಕಳವು ಗೈದ ಚಿನ್ನಾಭರಣ, ನಗದಿನ ಪೈಕಿ ಭಾಗಶ: ನಗದು, ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯವನ್ನು ಮಹಜರಿನ ಬಳಿಕ ತಿಳಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸರ ವಿವಿಧ ತಂಡಗಳನ್ನು ರಚಿಸಲಾಗಿತ್ತು. ದರೋಡೆಯ ಬಳಿಕ ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ದರೋಡೆಕೋರರು ಪರಾರಿಯಾಗಿ, ಅಲ್ಲಿಂದ ತಮಿಳುನಾಡಿಗೆ ಪರಾರಿಯಾಗಿದ್ದರು.

ಮುಂಬೈ ಗ್ಯಾಂಗ್‌ನಿಂದ ಕೃತ್ಯ.: ದರೋಡೆಗೆಂದೇ ಮುಂಬೈನಿಂದ ದರೋಡೆಕೋರರು ಬಂದಿದ್ದರು. ದರೋಡೆ ಮಾಡಿ ಕೇರಳದಿಂದ ತಮಿಳುನಾಡುಗೆ ಪರಾರಿಯಾಗಿದ್ದರು ಮುಂಬೈಯಲ್ಲಿ ಒಬ್ಬನನ್ನು ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ ಮುರುಗಂಡಿ ತೇವರ್ ಈ ಪ್ರಕರಣದ ಮುಖ್ಯ ಕಿಂಗ್ ಪಿನ್. ವಶಕ್ಕೆ ಪಡೆದುಕೊಂಡಿರುವ ಫಿಯೆಟ್ ಕಾರು ಮಹಾರಷ್ಟ್ರ ಮೂಲದ್ದು, ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸ್ಥಳೀಯರ ಭಾಗಿ ಶಂಕೆ.: ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ನಡೆಸಲು ಸಾಧ್ಯ ಇಲ್ಲ. ಬಂಧಿತರು ಪ್ರಮುಖ ಆರೋಪಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮುಂದೆ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದಿದ್ದಾರೆ.
ಜ.೧೭ ರಂದು ಮಧ್ಯಾಹ್ನ ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಕೋಟೆಕಾರು ಸಹಕಾರಿ ಸಂಘದಚ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಕೋಟ್ಯಂತರ ರು. ಮೌಲ್ಯದ ನಗ ಹಾಗೂ ನಗದು ಸೊತ್ತುಗಳನ್ನು ದರೋಡೆ ನಡೆಸಿದ್ದರು. ೪ ಕೋಟಿ ರು. ಮೌಲ್ಯದ ನಗ ಹಾಗೂ ನಗದು ದರೋಡೆಯಾಗಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ
ನೀಡಿದ ಅಧಿಕೃತ ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಬ್ಯಾಂಕ್ ಅಧ್ಯಕ್ಷರು ೧೨ ಕೋಟಿಗೂ ಅಧಿಕ ಮೌಲ್ಯದ ನಗ ನಗದು ಲೂಟಿಯಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಪ್ರತ್ಯೇಕ ತಂಡವನ್ನು ರಚಿಸಿದ್ದರು. ಕೇರಳ, ತಮಿಳುನಾಡು, ಮುಂಬೈ ಹಾಗೂ ಉತ್ತರ ಭಾರತದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲದೆ ಸ್ಥಳೀಯ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

Previous article10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮೋದನೆ
Next articleವಿಡಿಯೋ ಮೂಲಕ ಹೊರಬಂದ ಸಂಗತಿ: ಶ್ರಮಿಕ ವರ್ಗದ ಮೇಲೆ ಅಮಾನವೀಯ ಶೋಷಣೆ