ಬೆಂಗಳೂರು: ಕೊನೆಗೂ ಬಿಜೆಪಿಯವರು ಬೆಲೆ ಏರಿಕೆಯ ಬಗ್ಗೆ ಮಾತನಾಡುವ ಮನಸು ಮಾಡಿದ್ದು ಉತ್ತಮ ಬೆಳವಣಿಗೆ! ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಿಜೆಪಿಯವರು ಅಸಲಿಗೆ ಮಾತನಾಡಬೇಕಿರುವುದು ಜನಾಕ್ರೋಶ ಪ್ರತಿಭಟನೆ ನಡೆಸಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ. ಕಳೆದ ಒಂದು ವರ್ಷದಲ್ಲಿ ಒಂದು ಸಾಮಾನ್ಯ ಸಸ್ಯಾಹಾರಿ ಊಟದ ಬೆಲೆ 57%ನಷ್ಟು ದುಬಾರಿಯಾಗಿದೆ.
- ತರಕಾರಿ ಹಾಗೂ ಬೇಳೆ ಕಾಳುಗಳು ಸೇರಿದಂತೆ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆಗಳು ಒಂದೂವರೆ ಪಟ್ಟು ಹೆಚ್ಚಾಗಿವೆ.
- ಪ್ರಸ್ತುತ ಕಚ್ಚಾ ತೈಲದ ಬೆಲೆ 34% ಇಳಿಕೆಯಾಗಿದೆ, ಆದರೆ ದೇಶದ ನಾಗರಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದುಬಾರಿ ಸುಂಕ, ತೆರಿಗೆಗಳನ್ನು ವಿಧಿಸಿ ₹36.58 ಲಕ್ಷ ಕೋಟಿ ಸಂಗ್ರಹಿಸಿದೆ ಕೇಂದ್ರ ಸರ್ಕಾರ.
- ಆರೋಗ್ಯ ಕ್ಷೇತ್ರದ ಹಣದುಬ್ಬರ 14% ಹೆಚ್ಚಿದೆ, ಸಾಮಾನ್ಯ ಔಷಧಗಳ ಬೆಲೆಯೂ ಅಧಿಕವಾಗಿ ಹೆಚ್ಚಳವಾಗಿದೆ.
- ಜೀವ ವಿಮೆ, ಅರೋಗ್ಯ ವಿಮೆಗಳ ಮೇಲೂ 18% ಜಿಎಸ್ಟಿ ಹೇರಲಾಗಿದೆ, ಮೊದಲ ಬಾರಿಗೆ ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕಲಾಗಿದೆ.
- ಏಪ್ರಿಲ್ ನಿಂದ ಎಟಿಎಂ ಶುಲ್ಕಗಳನ್ನೂ ಏರಿಸುತ್ತಿದೆ ಕೇಂದ್ರ ಸರ್ಕಾರ.
- 2018ರಿಂದ 2024ರವರೆಗೆ ಕನಿಷ್ಠ ಠೇವಣಿ ನಿರ್ವಹಿಸದ ದಂಡವಾಗಿ ಬಡ ಜನರಿಂದ 43,500 ಕೋಟಿ ಹಣ ಲೂಟಿಗೈದಿದೆ.
- ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ 70% ರಿಂದ 80%ನಷ್ಟು ದುಪ್ಪಟಾಗಿವೆ.
- 100 ಕೋಟಿಗೂ ಅಧಿಕ ಭಾರತೀಯರಿಗೆ ಅಗತ್ಯ ಸೇವೆಗಳಿಗೆ ಖರ್ಚು ಮಾಡಲಾಗದಷ್ಟು ಖರೀದಿ ಸಾಮರ್ಥ್ಯ ಕುಸಿದಿದೆ ಎಂದು ಬ್ಲೂಮ್ ವರದಿ ಮಾಡಿದೆ.
- ಟೋಲ್ ದರ ಏರಿಕೆಯು ಭಾರತೀಯರನ್ನು ಕಂಗಾಲಾಗಿಸಿದೆ, ಗ್ಯಾಸ್ ಸಿಲಿಂಡರ್ ದರ ಜನರನ್ನು ಒಲೆ ಹಚ್ಚದೆಯೇ ಸುಡುತ್ತಿದೆ!
ಕೇಂದ್ರ ಸರ್ಕಾರದ ಕಳಪೆ ಆರ್ಥಿಕ ನೀತಿಯಿಂದಾಗಿ ಹಣದುಬ್ಬರವು ಗಣನೀಯ ಏರಿಕೆಯಾಗಿದೆ, ಇದಕ್ಕೆ ಸರಿ ಹೊಂದಿಸಲು ಅನಿವಾರ್ಯವಾಗಿ ನಮ್ಮ ಸರ್ಕಾರ ಕೆಲವೊಂದಿಷ್ಟು ಬೆಲೆಗಳನ್ನು ಪರಿಷ್ಕರಿಸಿದೆ.
ಆದರೆ ಅದಕ್ಕೆ ಮೂಲ ಕಾರಣ ಕೇಂದ್ರ ಸರ್ಕಾರ. ಕರ್ನಾಟಕ ಬಿಜೆಪಿ ನಾಯಕರು ಜನರ ಎದೆಗೆ ಕಿವಿಗೊಟ್ಟರೆ ಆ ಆಕ್ರೋಶ ಕೇಳಿಸಲಿದೆ ಎಂದಿದ್ದಾರೆ.