ಕೆಲಸ ಮಾಡುತ್ತಿದ್ದಾರೋ ಇಲ್ಲ, ಕಾಲ ಕಳೆಯುತ್ತಿದ್ದಾರೋ?

0
40

ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ನೀಡಬೇಕು ಎಂಬ ನಿಯಮವಿದ್ದರೂ ಅದು ಯಾಕೆ ಪಾಲನೆ ಆಗುತ್ತಿಲ್ಲ?

ಬೆಂಗಳೂರು: ರಾಜ್ಯದ 31.28 ಲಕ್ಷ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವದಿಂದ ವಂಚಿತರಾಗಿದ್ದು, ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸಹಕಾರಿ ಸಚಿವ ಕೆ. ಎನ್‌. ರಾಜಣ್ಣ ಅವರು ಇಲಾಖೆಯ ಕೆಲಸ ಮಾಡುತ್ತಿದ್ದಾರೋ ಇಲ್ಲ ಬರೀ ಬಣ ರಾಜಕೀಯದಲ್ಲಿ ಕಾಲ ಕಳೆಯುತ್ತಿದ್ದಾರೋ? ಆಯಾ ಸೊಸೈಟಿಗಳ ವ್ಯಾಪ್ತಿಗೆ ಒಳಪಡುವ ರೈತರಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಕಡ್ಡಾಯವಾಗಿ ಸದಸ್ಯತ್ವ ನೀಡಬೇಕು ಎಂಬ ನಿಯಮವಿದ್ದರೂ ಅದು ಯಾಕೆ ಪಾಲನೆ ಆಗುತ್ತಿಲ್ಲ? ರಾಜ್ಯ 86.81 ಲಕ್ಷ ರೈತರ ಪೈಕಿ 31.28 ಲಕ್ಷ ರೈತರಿಗೆ ಸೊಸೈಟಿ ಸದಸ್ಯತ್ವ ಯಾಕೆ ಸಿಕ್ಕಿಲ್ಲ? 2024-25 ನೇ ಸಾಲಿನಲ್ಲಿ 27,000 ಕೋಟಿ ಸಾಲ ವಿತರಿಸುತ್ತೇವೆ ಎಂದು ಹೇಳಿ ಈಗ ಕೇವಲ 17,717 ಕೋಟಿ ಸಾಲ ವಿತರಣೆ ಆಗಿದೆಯಲ್ಲ, ರೈತರಿಗೆ ಸಾಲ ಕೊಡಲು ಸರ್ಕಾರದ ಬಳಿ ದುಡ್ಡಲ್ಲವೇ?

ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯತ್ವ ಸಿಕ್ಕಿದ್ದಿದ್ದರೆ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ಸಾಲ ಸಿಗುತ್ತಿತ್ತು, ಮೈಕ್ರೋ ಫೈನಾನ್ಸ್ ಕಂಪನಿಗಳ ಬಳಿ ಸಾಲದ ಮೊರೆ ಹೋಗುವ ಅನಿವಾರ್ಯತೆ ತಪ್ಪುತ್ತಿತ್ತು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ರೈತರ ಸಾವಿಗೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.

Previous articleಕುಂಭ ಮೇಳದಲ್ಲಿ ಜೈ RCB: ವೈರಲ್‌ ಆದ ವಿಡಿಯೋ…
Next articleಭಿನ್ನಾಭಿಪ್ರಾಯದ ಮಾತಿನ ಸಮರ ಅತ್ಯಂತ ದುರದೃಷ್ಟಕರ