ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಸಂಚು ರೂಪಿಸಿದವರು ಮೂರು ಜನರಲ್ಲ, ನಾಲ್ಕು ಜನರು ಎಂಬುದನ್ನು ಎನ್‌ಐಎ ಅಧಿಕಾರಿಗಳು ಖಚಿತಪಡಿಸಿದ್ದು, ಪ್ರಮುಖ ಆರೋಪಿ ಎನ್ನಲಾದ ಮಾಜ್ ಮುನೀರ್ ಅಹಮದ್(೨೬)ನನ್ನು ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ನಿವಾಸಿ ಮಾಜ್ ಮುನೀರ್ ಅಹಮದ್ ತೀರ್ಥಹಳ್ಳಿಯ ಮೀನು ಮಾರುಕಟ್ಟೆ ರಸ್ತೆಯ ಮಾಜ್, ಎಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ವಿವಿಧ ಭಯೋತ್ಪಾದನಾ ಸಂಘಟನೆಗಳ ಪರವಾಗಿ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದನು. ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಐಇಡಿ (ಕಚ್ಚಾ ಬಾಂಬ್‌ಗಳನ್ನು) ಪರೀಕ್ಷಾರ್ಥವಾಗಿ ಸ್ಫೋಟಿಸಿದ್ದ ಪ್ರಕರಣದಲ್ಲಿ ಮಾಜ್ ಮುನೀರ್‌ನನ್ನು ಬಂಧಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.
ಇತ್ತೀಚೆಗೆ ಚಿಕ್ಕಮಗಳೂರಿನ ಕಳಸದ ನಿವಾಸಿ ಶಂಕಿತ ಮುಜಮಿಲ್ ಶರೀಫ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಕೆಫೆ ಸ್ಫೋಟದ ಬಾಂಬ್ ತಯಾರಿಕೆ ಹಾಗೂ ಸ್ಫೋಟದ ಸಂಚಿನಲ್ಲಿ ಮಾಜ್ ಮುನೀರ್ ಕೈವಾಡ ಇರುವ ಮಾಹಿತಿ ನೀಡಿದ್ದನು. ಅಲ್ಲದೇ ಮಾರ್ಚ್ ತಿಂಗಳಲ್ಲಿ ೧೪ದಿನಗಳ ಕಾಲ ಎನ್‌ಐಎ ಮಾಜ್‌ನನ್ನು ಕಸ್ಟಡಿಗೆ ತೆಗೆದುಕೊಂಡು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿತ್ತು. ಇದೇ ವಿಚಾರವಾಗಿ ಮುಜಮಿಲ್ ಹೇಳಿಕೆ ಮತ್ತು ಕೆಫೆ ಬಾಂಬ್ ಸ್ಫೋಟದಲ್ಲಿ ದೊರೆತ ಪುರಾವೆ ಹಾಗೂ ಇಐಡಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ದೊರೆತ ಕಚ್ಚಾ ವಸ್ತುಗಳು ಸಾಕ್ಷಿಆಧಾರದ ಮೇಲೆ ರಾಮೇಶ್ವರ ಕೆಫೆ ಸ್ಫೋಟದ ಪ್ರಮುಖ ಆರೋಪಿ ಮಾಜ್‌ಮುನೀರ್ ಎಂಬುದನ್ನು ಎನ್‌ಐಎ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಆರೋಪಿಗಳ ಪಟ್ಟಿ
ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಎಒನ್ ಆರೋಪಿ ಮಾಜ್ ಮುನೀರ್ ಅಹಮದ್ ವಿರುದ್ದ ಎನ್‌ಐಎ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗಿದೆ. ಈಗಾಗಲೇ ತಲೆಮರೆಸಿಕೊಂಡಿರುವ ಮುಸಾವೀರ್ ಹುಸೇನ್ ಎ೨ ಆರೋಪಿಯಾಗಿದ್ದಾನೆ. ಅಬ್ದುಲ್ ಮಥೀನ್ ಅಹ್ಮದ್ ತಾಹ ಎ೩ ಆರೋಪಿಯಾಗಿದ್ದಾನೆ. ನಾಲ್ಕನೇ ಆರೋಪಿ ಮುಜಮಿಲ್ ಶರೀಫ್ ನಾಲ್ಕನೇ ಆರೋಪಿಯನ್ನಾಗಿ ಎನ್‌ಐಎ ಅಧಿಕಾರಿಗಳು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆ ಚುರುಕು
ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಜೈಲಿನಲ್ಲೇ ಇದ್ದುಕೊಂಡು ಸಂಚು ರೂಪಿಸಿದ್ದ ಮಾಜ್ ಮುನೀರ್ ತನ ಸಹಚರರಾಗಿರುವ ಶಂಕಿತ ಮುಸಾವೀರ್ ಹುಸೇನ್ ಹಾಗೂ ಅಬ್ದುಲ್ ಇಐಡಿ ತಯಾರಿಸಲು ಪರಿಣಿತಿ ಹೊಂದಿದ್ದರು. ಇವರಿಗೆ ಸಹಾಯವಾಗಿ ಮುಜಮಿಲ್ ಶರೀಫ್ ಸ್ಥಳೀಯವಾಗಿ ದೊರೆಯುವ ಇತರೆ ಸಾಮಗ್ರಿಗಳನ್ನು ಪೂರೈಕೆ ಮಾಡುವ ವ್ಯಕ್ತಿಯಾಗಿ ಕೆಲಸ ಮಾಡಿದ್ದನು ಎನ್ನಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಮುಜ್ ಮುನೀರ್ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಮೊಹಮ್ಮದ್ ಶಾರೀಕ್ ಹಾಗೂ ಅರಾಫತ್ ಜೊತೆಯಲ್ಲಿ ಸಂಪರ್ಕ ಹೊಂದಿದ್ದನು. ಈ ಶಂಕಿತರೊಂದಿಗೆ ಮಾಜ್ ಮಾತುಕತೆ ನಡೆಸಿರುವುದು ಸೇರಿದಂತೆ ಇತರೆ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.