ಬೆಂಗಳೂರು: ಶಾಸಕಾಂಗ ಸಭೆಯಲ್ಲಿನ ಸೂಚನೆಯ ಬಳಿಕವೂ ಕೈ ನಾಯಕರ ಅಸಮಾಧಾನಗಳು ಕಡಿಮೆಯಾಗಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧವೇ ಅಸಮಾಧಾನ ಹೊರಹಾಕಿರುವುದು. ಕೆಪಿಸಿಸಿಗೆ ಜನಪ್ರಿಯ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ತಿಳಿಸಿದ್ದೇನೆಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡಿ ಎಂದು ಹೇಳುತ್ತಿಲ್ಲ. ಸಚಿವರಾದ ಮೇಲೆ ನಾವು ಪಕ್ಷಕ್ಕೆ ಹೆಚ್ಚಿನ ಸಮಯ ಕೊಡುವುದು ಸಾಧ್ಯವಾಗುತ್ತಿಲ್ಲ. ೨೦೨೩ರಲ್ಲಿ ಇದ್ದ ವೇಗ ಈಗಿಲ್ಲ, ಹಾಗಾಗಿ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಂದುವರೆಯಬೇಕಾ, ಬೇರೆಯವರು ಅಧ್ಯಕ್ಷರಾಗಬೇಕಾ? ಎಂಬುದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ತ್ವರಿತವಾಗಿ ತೀರ್ಮಾನ ಮಾಡಬೇಕು ಎಂದು ಸತೀಶ್ ಒತ್ತಾಯಿಸಿದರು.